ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಕುರಿತು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿದಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದೀಗ ಮೌನ ಮುರಿದಿದ್ದಾರೆ. ಸೋನಮ್ ಅವರನ್ನು ಜಂತರ್ ಮಂತರ್ನಿಂದ ಬಲವಂತವಾಗಿ ಹೊತ್ತೊಯ್ದ ಕ್ರಮವನ್ನು ಖಂಡಿಸಿದ್ದಾರೆ. “ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವ್ಯಕ್ತಿಯನ್ನು ಬಲವಂತವಾಗಿ ಸ್ಥಳಾಂತರಿಸಿದ್ದು ತಪ್ಪು. ಅಸತ್ಯ ಮತ್ತು ಹಿಂಸೆಯೇ ಬಿಜೆಪಿ ಸರ್ಕಾರದ ಮಾರ್ಗವಾಗಿದೆ” ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮೋದಿ ಸರ್ಕಾರದ ಆಡಳಿತದ ಮೂಲ ತತ್ವಗಳೇ ‘ಅಸತ್ಯ ಮತ್ತು ಹಿಂಸೆ’. ಅಹಿಂಸಾತ್ಮಕ ಉಪವಾಸ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ಜಂತರ್ ಮಂತರ್ನಿಂದ ತೆರವುಗೊಳಿಸಿರುವುದು ತಪ್ಪು. ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣದ ಹೆಚ್ಚುತ್ತಿರುವ ವೆಚ್ಚ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ದೇಶದ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು. ಬಲಪ್ರಯೋಗದಿಂದ ವಿದ್ಯಾರ್ಥಿಗಳ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಸೋನಮ್ ವಾಂಗ್ಚುಕ್ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಶನಿವಾರ 21ನೇ ದಿನಕ್ಕೆ ಕಾಲಿಟ್ಟಿತ್ತು. ಈ ವೇಳೆ ಅವರನ್ನು ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ಹೊತ್ತೊಯ್ದು, ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೆಹಲಿ ಹೈಕೋರ್ಟ್ ಸೂಚನೆ ಮತ್ತು ವೈದ್ಯರ ಸಲಹೆಯಂತೆ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಉಪವಾಸದಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗಿದ್ದು, ಅವರು ದುರ್ಬಲಗೊಂಡಿರುವ ಕಾರಣ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಸಫ್ದರ್ಜಂಗ್ ಆಸ್ಪತ್ರೆ ಪ್ರಕಟಿಸಿದೆ.
ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದನ್ನು ಅವರ ಪತ್ನಿ ಗೀತಾಂಜಲಿ ಜೆ ಪ್ರಶ್ನಿಸಿದ್ದಾರೆ. ತಮ್ಮ ಅನುಮತಿಯಿಲ್ಲದೆ ಯಾವುದೇ ಚಿಕಿತ್ಸೆ ನೀಡಬಾರದು. ಹೈಕೋರ್ಟ್ ಆದೇಶದಲ್ಲಿ ಆಸ್ಪತ್ರೆಗೆ ದಾಖಲಿಸುವಂತೆ ಯಾವುದೇ ನಿರ್ದೇಶನ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿ ಪೊಲೀಸರ ಕ್ರಮವನ್ನು ಎಎಪಿ ಸಂಸದ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ ಘೋಷ್, ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಟೀಕಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಜೂನ್ 20ರಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದೆ. ಜುಲೈ 20ರಂದು ಸಂಸತ್ ಚಲೋ ಮೆರವಣಿಗೆಗೆ ಕರೆಕೊಟ್ಟಿದೆ.




