ಡೆಹ್ರಾಡೂನ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಭಾರಿ ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆಯಿಂದಾಗಿ ವ್ಯಾಪಕ ಸಂಕಷ್ಟ ಸಂಭವಿಸಿದೆ.
ಚಂದ್ರಭಾಗ ನದಿ ಬೆಳಿಗ್ಗೆಯಿಂದ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, ನೀರು ಹೆದ್ದಾರಿಯನ್ನು ತಲುಪಿದೆ. ಹಲವಾರು ವಾಹನಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ.
ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಉಕ್ಕಿ ಹರಿಯುತ್ತಿರುವ ತಮ್ಸಾ ನದಿಯ ದಡದಲ್ಲಿ ಮನೆಗಳು, ರಸ್ತೆಗಳು, ಕಾರುಗಳು ಮತ್ತು ಅಂಗಡಿಗಳು ಭಾರೀ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಮತ್ತು ಇಬ್ಬರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
“ಸೋಮವಾರ ತಡರಾತ್ರಿ ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ. ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ” ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ ಪ್ರಕಾರ, ನದಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿರುವುದಾಗಿ ತಿಳಿಸಿದೆ. ಹಲವಾರು ವಾಹನಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ನಿವಾಸಿಗಳು ಜಾಗರೂಕರಾಗಿರಲು ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಕೆರೆಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಗಂಟೆಗೆ 15 ಮಿಮೀಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆ ಮತ್ತು ಗಂಟೆಗೆ 87 ಕಿ.ಮೀ ವೇಗದಲ್ಲಿ ಬೀಸುವ ಗಾಳಿ ಬೀಸಲಿದೆ ಎಂದು ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.
