ನ್ಯಾಯಾಲಯದ ಆದೇಶಗಳನ್ನು ಗೌರವಿಸದೆ ನ್ಯಾಯಾಂಗ ನಿಂದನೆ ಮಾಡಿದ ಪ್ರಕರಣದಲ್ಲಿ ಬೈಜೂಸ್ ಶಿಕ್ಷಣ ಸಂಸ್ಥೆಯ ಸ್ಥಾಪಕ, ಉದ್ಯಮಿ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಬ್ಲೂಮ್ಬರ್ಗ್ ಬುಧವಾರ ವರದಿ ಮಾಡಿದೆ.
ಬೈಜು ರವೀಂದ್ರನ್ ಅವರು ತಮ್ಮ ವೈಯಕ್ತಿಕ ಮತ್ತು ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ನೀಡಿದ್ದ ಸರಣಿ ಆದೇಶಗಳನ್ನು 2024ರ ಏಪ್ರಿಲ್ನಿಂದ ನಿರಂತರವಾಗಿ ನಿರ್ಲಕ್ಷಿಸಿದ್ದರು. ಆದ್ದರಿಂದ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಬೈಜೂಸ್ನಿಂದ ಭಾರತದಲ್ಲಿ ಹೆಚ್ಚಿನ ಹೂಡಿಕೆ: ಸಿಇಒ ರವೀಂದ್ರನ್
ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್ಸ್ ದಾಖಲಿಸಿದ ಒಪ್ಪಂದ ಉಲ್ಲಂಘನೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ಬಂದಿದೆ. ಯಾವುದೇ ನೆಪ ಹೇಳದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ರವೀಂದ್ರನ್ಗೆ ಕೋರ್ಟ್ ಖಡಕ್ ಸೂಚನೆ ನೀಡಿದೆ.
ಅಧಿಕಾರಿಗಳಿಗೆ ಶರಣಾಗಲು, ರೂ. 67.50 ಲಕ್ಷ ವೆಚ್ಚವನ್ನು ಪಾವತಿಸಲು ಮತ್ತು ಸಂಬಂಧಿತ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದ ಕಾರ್ಪೊರೇಟ್ ಘಟಕವಾದ ಬೀಯರ್ ಇನ್ವೆಸ್ಟ್ಕೊ ಪ್ರೈವೇಟ್ ಲಿಮಿಟೆಡ್ನ ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿತ್ತು.
ಇನ್ನು ಈಗಾಗಲೇ ವಿದೇಶಿ ಹೂಡಿಕೆ ಪಡೆಯುವಾಗ ಮತ್ತು ವಿದೇಶಕ್ಕೆ ಹಣ ಕಳುಹಿಸುವಾಗ ಸುಮಾರು ₹9,000 ಕೋಟಿಗೂ ಅಧಿಕ ಮೊತ್ತದ ಫೆಮಾ (FEMA) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ತನಿಖೆ ನಡೆಸುತ್ತಿದೆ.





