ದೇವಾಲಯ ಪ್ರವೇಶಕ್ಕೆ ಮುಂದಾದ ದಲಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಜಾತಿ ದೌರ್ಜನ್ಯದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸದಾಸರ್ ಗ್ರಾಮದಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ, ಗ್ರಾಮದ ದಲಿತ ಸಮುದಾಯದ ಕೆಲವರು ತಮಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ದೇವಸ್ಥಾನ ಪ್ರವೇಶಿಸಲು ನಮಗೂ ಹಕ್ಕು ಇದೆ ಎಂದು ದೇವಾಲಯ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ, ಅವರನ್ನು ತಡೆದ ಪ್ರಬಲ ಜಾತಿಯ ದುರುಳರ ಗುಂಪೊಂದು ದಲಿತರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ದಲಿತರು ಸ್ಥಳೀಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ದಲಿತ ಸಮುದಾಯದ ಕಾನಾರಾಮ್ ಮೇಘ್ವಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕೆ.ಆರ್.ಪೇಟೆ | ರಾತ್ರೋರಾತ್ರಿ ಗಣಪತಿ ಇಟ್ಟು ವಿವಾದ ಸೃಷ್ಟಿಸಲು ಯತ್ನ?
“ಗ್ರಾಮದಲ್ಲಿ ಶೋಭಾ ಯಾತ್ರೆ ನಡೆಯುತ್ತಿತ್ತು. ಆ ಸಮಯದಲ್ಲಿ, ದೇವರ ದರ್ಶನ ಪಡೆಯಲು ದಲಿತ ಸಮುದಾಯದ ಮುಖಂಡರು ದೇವಾಲಯ ಪ್ರವೇಶಿಸಲು ಮುಂದಾಗಿದ್ದೆವು. ಈ ವೇಳೆ, ಗ್ರಾಮದ ಪ್ರಬಲ ಜಾತಿಯ ಸೂರ್ದಾಸ್ ಸ್ವಾಮಿ, ಶಂಕರ್ ಲಾಲ್, ಹಿಮ್ಮತ್ ಕುಮಾರ್ ಹಾಗೂ ಅನಿಲ್ ಸೇರಿದಂತೆ ಕೆಲವರು ನಮ್ಮನ್ನು ತಡೆದು, ಹಲ್ಲೆ ನಡೆಸಿದ್ದಾರೆ” ಎಂದು ಮೇಘ್ವಾಲ್ ಆರೋಪಿಸಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಗೊದಾರ ಹೇಳಿದ್ದಾರೆ.