2027ರ ಜನಗಣತಿಗೆ ಗಣತಿದಾರರಾಗಿ ಕಾರ್ಯನಿರ್ವಹಿಸುವವರ ಅರ್ಹತಾ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸೇರಿದಂತೆ ವಿವಿಧ ಸಂಸ್ಥೆಗಳ ಸಿಬ್ಬಂದಿಯನ್ನೂ ಜನಗಣತಿ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿರ್ಧಾರದ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಗಣತಿದಾರರನ್ನಾಗಿ ನೇಮಿಸುವ ಉದ್ದೇಶವಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಅಕ್ಟೋಬರ್ 16ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಂತೆ, 1990ರ ಜನಗಣತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರು, ಬ್ಯಾಂಕುಗಳು, ಸಾರ್ವಜನಿಕ ಉದ್ದಿಮೆಗಳು, ಕಂಪನಿಗಳು, ಸಂಘಸಂಸ್ಥೆಗಳು ಮತ್ತು ಟ್ರಸ್ಟ್ಗಳ ಸಿಬ್ಬಂದಿಯನ್ನು ಗಣತಿದಾರರನ್ನಾಗಿ ನೇಮಿಸಬಹುದು. ರಾಜ್ಯ ಸರ್ಕಾರಗಳು ಸೂಕ್ತವೆಂದು ಪರಿಗಣಿಸುವ ಇತರ ವ್ಯಕ್ತಿಗಳಿಗೂ ಅವಕಾಶ ನೀಡಲಾಗಿದೆ.
ಈ ತಿದ್ದುಪಡಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತೀವ್ರವಾಗಿ ಖಂಡಿಸಿದ್ದಾರೆ. ಗಣತಿದಾರರ ನೇಮಕದ ವ್ಯಾಪ್ತಿ ವಿಸ್ತರಿಸುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿರುವ ಅವರು, ಇದು ಸಾವಿರಾರು ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಉದ್ಯೋಗ ಕಲ್ಪಿಸುವ ಯೋಜನೆಯಂತಿದೆ ಎಂದು ಟೀಕಿಸಿದ್ದಾರೆ. ಜನಗಣತಿಯ ವಿಶ್ವಾಸಾರ್ಹತೆಗೆ ಧಕ್ಕೆಯಾಗುವ ಅಪಾಯವಿದೆ ಎಂದಿದ್ದಾರೆ.
ಜುಲೈ 10ರಿಂದ 12ರವರೆಗೆ ಕರ್ನಾಟಕದ ಬೆಳಗಾವಿಯಲ್ಲಿ ಜನಗಣತಿ ಕುರಿತು ಆರೆಸ್ಸೆಸ್ ಕಾರ್ಯಕರ್ತರಿಗೆ ತರಬೇತಿ ಶಿಬಿರ ನಡೆದಿತ್ತು ಎಂದು ರಮೇಶ್ ಹೇಳಿದ್ದಾರೆ. ಅಲ್ಲದೆ, ಮೇ 26ರಂದು ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಜನಸಂಖ್ಯಾ ಬದಲಾವಣೆಗಳ ಪರಿಶೀಲನಾ ಸಮಿತಿಯು ಅಕ್ಟೋಬರ್ 14ರಂದು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ. ಈ ಬೆಳವಣಿಗೆಗಳಿಗೂ ಹೊಸ ಅಧಿಸೂಚನೆಗೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ, ಖಾಸಗಿ ಶಾಲೆಗಳ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸುವುದನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 8ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಖಾಸಗಿ ಶಾಲಾ ಶಿಕ್ಷಕರ ವಿವರಗಳನ್ನು ಕೇಳಿದ್ದ ಹರಿಯಾಣ ಸರ್ಕಾರದ ಎರಡು ಪತ್ರಗಳಿಗೆ ತಾತ್ಕಾಲಿಕ ತಡೆ ನೀಡಿತ್ತು. ಇದರ ನಡುವೆಯೇ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಪ್ರಕಟಿಸಿದೆ.
2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ 2027ರ ಜನಗಣತಿಯು ಮನೆಗಳ ಪಟ್ಟಿ ಹಾಗೂ ವಸತಿ ಮಾಹಿತಿ ಸಂಗ್ರಹ ಮತ್ತು ಜನಸಂಖ್ಯೆ ಎಣಿಕೆ ಎಂಬ ಎರಡು ಹಂತಗಳಲ್ಲಿ ನಡೆಯುತ್ತಿದೆ.





