ಸುಮಾರು 64 ವರ್ಷಗಳಷ್ಟು ಹಳೆಯದಾದ ‘ಆದಾಯ ತೆರಿಗೆ ಕಾಯ್ದೆ-1961’ಅನ್ನು ಬದಲಿಸಲು ಕೇಂದ್ರ ಸರ್ಕಾರವು ಹೊಸ ಮಸೂದೆಯನ್ನು ರೂಪಿಸಿತ್ತು. ಹಿಂದಿನ ಬಜೆಟ್ ಅಧಿವೇಶನದಲ್ಲಿ ‘ಆದಾಯ ತೆರಿಗೆ ಮಸೂದೆ-2025’ಅನ್ನು ಫೆಬ್ರವರಿ 13ರಂದು ಲೋಕಸಭೆಯಲ್ಲಿ ಮಂಡಿಸಿತ್ತು. ಇದೀಗ, ಆ ಮಸೂದೆಯನ್ನು ಸರ್ಕಾರ ಹಿಂಪಡೆದಿದೆ. ಹೊಸ ಮಸೂದೆಯನ್ನು ರಚಿಸಲಾಗಿದ್ದು, ಅದನ್ನು ಸೋಮವಾರ ಮಂಡಿಸುವುದಾಗಿ ತಿಳಿಸಿದೆ.
ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಸೂದೆಯ ಪರಿಶೀಲನೆಗೆ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರೂಪಿಸಲಾಗಿತ್ತು. ಆ ಸಮಿತಿಯು ಕೆಲವು ಶಿಫಾರಸುಗಳನ್ನು ಸೂಚಿಸಿದೆ. ಆ ಶಿಫಾರಸುಗಳನ್ನು ಒಳಗೊಂಡು ಹೊಸ ಮಸೂದೆಯನ್ನು ಹಣಕಾಸು ಸಚಿವಾಲಯವು ರೂಪಿಸಿದೆ. ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲು ಸರ್ಕಾರ ನಿರ್ಧರಿಸಿದೆ.
‘ಆದಾಯ ತೆರಿಗೆ ಮಸೂದೆ-2025’ಯು ಕ್ರಿಪ್ಟೋ ಕರೆನ್ಸಿ ಮತ್ತು ಇತರ ಡಿಜಿಟಲ್ ಆಸ್ತಿಗಳನ್ನು ‘ವರ್ಚ್ಯುವಲ್ ಡಿಜಿಟಲ್ ಆಸ್ತಿಗಳು’ ಎಂದು ವರ್ಗೀಕರಿಸಿ, ಇವುಗಳ ಮೇಲಿನ ಆದಾಯವನ್ನು ತೆರಿಗೆ ವ್ಯಾಪ್ತಿಗೆ ತುರುವುದು, ತೆರಿಗೆ ರಿಯಾಯತಿ ಮಿತಿಯ ವಿಸ್ತರಣೆ, ಟಿಡಿಎಸ್ ಮತ್ತು ಟಿಸಿಎಸ್ ಮಿತಿಗಳಲ್ಲಿ ಹೆಚ್ಚಳ, ಐಟಿ ರಿಟರ್ನ್ ಗಡುವು ವಿಸ್ತರಣೆ ಸೇರಿದಂತೆ ಗಮನಾರ್ಹ ಬದಲಾವಣೆಗಳನ್ನು ತರಲು ಉದ್ದೇಶಿಸಿತ್ತು.