ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ 2009ರಲ್ಲಿ ಚಪ್ಪಲಿ ಎಸೆಯಲು ಯತ್ನಿಸಲಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಭಾರೀ ಆಕ್ರೋಶವನ್ನು ಹುಟ್ಟು ಹಾಕಿದೆ. ಅತ್ಯುನ್ನತ ಸ್ಥಾನದಲ್ಲಿರುವ ಗವಾಯಿ ಅವರಿಗೆಯೇ ಇಂತಹ ಪರಿಸ್ಥಿತಿ ಒದಗಿರುವಾಗ ಸಾಮಾನ್ಯ ದಲಿತರ ಸ್ಥಿತಿ ಏನಾಗಿರಬಹುದು ಎಂದು ಜನರು ಪ್ರಶ್ನಿಸತೊಡಗಿದ್ದಾರೆ. ಸಿಜೆಐ ಮೇಲೆ ಆದ ದಾಳಿಯು ಸಂವಿಧಾನದ ಮೇಲಾದ ದಾಳಿ ಎಂದೇ ಅಭಿಪ್ರಾಯಗಳು ವ್ಯಕ್ತವಾಗಿವೆ. ಶೂ ಎಸೆಯಲು ಬಂದ ರಾಕೇಶ್ ಕಿಶೋರ್ ಎಂಬಾತ ವಕೀಲ ಎಂಬುದು ಮತ್ತಷ್ಟು ಕಳವಳಕಾರಿ ಸಂಗತಿ.
ರಾಕೇಶ್ ಕಿಶೋರ್‌ನ ಅವಿವೇಕಿತನಕ್ಕೆ ಸೊಪ್ಪು ಹಾಕದ ಗವಾಯಿಯವರು, “ನಾನು ಇದೆಲ್ಲದರಿಂದ ವಿಚಲಿತನಾಗುವುದಿಲ್ಲ. ನೀವು ಕೂಡ ವಿಚಲಿತರಾಗಬೇಡಿ ಮತ್ತು ಪ್ರಕರಣವನ್ನು ಮುಂದುವರಿಸಿ” ಎಂದು ವಿಚಾರಣೆಯನ್ನು ಮುಂದುವರಿಸಿ ಹೃದಯ ವೈಶಾಲ್ಯತೆ ಮೆರೆದರು. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಓದಿಕೊಂಡ ಸಂವಿಧಾನ ಮಾರ್ಗಿಗಳ ವಿವೇಕ ಎಂಬ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.
ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತವರ ಮೇಲೆ ಈ ಹಿಂದೆಯೂ ಹಲ್ಲೆಗಳನ್ನು ನಡೆಸುವ ಘಟನೆಗಳಾಗಿವೆ. ಆದರೆ ದೇಶದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಸೈದ್ಧಾಂತಿಕ ಕಾರಣಕ್ಕೆ ಹಲ್ಲೆ ನಡೆಸಲು ಯತ್ನಿಸುವಷ್ಟು ವಿಕೃತಿ ಇದೇ ಮೊದಲಿಗೆ ಘಟಿಸುತ್ತಿದೆ. ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಹಲ್ಲೆ ಮತ್ತು ಕೊಲೆ ಮಾಡಿರುವ ಪ್ರಮುಖ ಘಟನೆಗಳನ್ನು ನಿನ್ನೆಯ ವಿದ್ಯಮಾನ ಮತ್ತೆ ನೆನಪಿಸಿದೆ.
ಜಸ್ಟಿಸ್ ಅರಿಜಿತ್ ಪಸಾಯತ್ ಮೇಲೆ ಹಲ್ಲೆಗೆ ಯತ್ನ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ 2009ರಲ್ಲಿ ಚಪ್ಪಲಿ ಎಸೆಯಲು ಯತ್ನಿಸಲಾಗಿತ್ತು. 2009ರ ಮಾರ್ಚ್ 20ರಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಎ. ಕೆ. ಗಾಂಗೂಲಿ ಅವರಿದ್ದ ಪೀಠದಲ್ಲಿ ಮುಂಬೈನ ‘ಬಾಸ್ ಸ್ಕೂಲ್ ಆಫ್ ಮ್ಯೂಸಿಕ್’ಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಪ್ರಕರಣದ ಕಕ್ಷಿದಾರರಲ್ಲಿ ಒಬ್ಬರಾಗಿದ್ದ ಮಹಿಳೆಯು, ಕೋರ್ಟ್ ಕಲಾಪ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ತಮ್ಮ ಚಪ್ಪಲಿಯನ್ನು ತೆಗೆದು ನ್ಯಾಯಮೂರ್ತಿ ಪಸಾಯತ್ ಅವರ ಕಡೆಗೆ ಎಸೆದರು. ಈ ಚಪ್ಪಲಿಯು ನ್ಯಾಯಮೂರ್ತಿಯವರಿಗೆ ತಗುಲಲಿಲ್ಲ. ಅವರು ಸ್ವಲ್ಪ ಹಿಂದೆ ಸರಿದು ತಪ್ಪಿಸಿಕೊಂಡರು. ಈ ಘಟನೆಯನ್ನು ನ್ಯಾಯಾಂಗದ ನಿಂದನೆ ಎಂದು ಪರಿಗಣಿಸಲಾಯಿತು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ಕು ಮಹಿಳೆಯರನ್ನು ನ್ಯಾಯಾಲಯವು ದೋಷಿಗಳೆಂದು ಪರಿಗಣಿಸಿ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತು.

ಜಾರ್ಖಂಡ್‌ನಲ್ಲಿ ಜಡ್ಜ್ ಹತ್ಯೆ
ಜುಲೈ 2021ರಲ್ಲಿ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ನಡೆದ ಭೀಕರ ಹತ್ಯೆಯನ್ನು ಮರೆಯಲಾಗದ್ದು. ನ್ಯಾಯಾಧೀಶ ಉತ್ತಮ್ ಆನಂದ್ ಅವರು ಎಂದಿನಂತೆ ಮುಂಜಾನೆ ವಾಕಿಂಗ್ ಹೋಗಿದ್ದಾಗ, ಅವರ ಹಿಂಭಾಗದಿಂದ ಬಂದ ಒಂದು ಆಟೋರಿಕ್ಷಾ ಉದ್ದೇಶಪೂರ್ವಕವಾಗಿ ಅವರ ಮೇಲೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ಘಟನೆಯ ಸಂಪೂರ್ಣ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತೀವ್ರ ಗಾಯಗೊಂಡ ನ್ಯಾಯಾಧೀಶರು ಆಸ್ಪತ್ರೆಯಲ್ಲಿ ನಿಧನರಾದರು.
ಆರಂಭದಲ್ಲಿ ಅಪಘಾತವೆಂದು ಶಂಕಿಸಲಾಗಿದ್ದರೂ, ಸಿಸಿಟಿವಿ ದೃಶ್ಯಗಳು ಮತ್ತು ಪ್ರಕರಣದ ಗಂಭೀರತೆಯಿಂದಾಗಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಯಿತು. ಸಿಬಿಐ ತನಿಖೆ ನಡೆಸಿ ಆಟೋರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ಎಂಬ ಇಬ್ಬರನ್ನು ಬಂಧಿಸಿತು. ಕೊಲೆ ಮಾಡಿರುವ ಆರೋಪ ಸಾಬೀತಾಯಿತು. ಆಗಸ್ಟ್ 2022 ರಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (ಕಡೆಯ ಉಸಿರಿನವರೆಗೆ ಕಠಿಣ ಜೈಲು ಶಿಕ್ಷೆ) ವಿಧಿಸಿತು.
ಇದನ್ನೂ ಓದಿರಿ: ಹೊಗಳಿದರಷ್ಟೇ ಸಾಕೇ, ಜಾರ್ಜ್ ಮೌಲ್ಯಗಳನ್ನು ಜರ್ನಲಿಸಂಗೆ ಅಳವಡಿಸಿಕೊಳ್ಳಲೂಬೇಕೇ?
ನ್ಯಾಯಾಧೀಶ ಉತ್ತಮ್ ಆನಂದ್ ಅವರು ಸ್ಥಳೀಯ ಸಂಘಟಿತ ಅಪರಾಧ ಮತ್ತು ದೊಡ್ಡ ವಹಿವಾಟುಗಳಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು. ಹಾಗಾಗಿ ಈ ಕೊಲೆಯ ಹಿಂದೆ ದೊಡ್ಡ ಪಿತೂರಿ ಇರಬಹುದು ಎಂದು ಅವರ ಕುಟುಂಬ ಮತ್ತು ಕಾನೂನು ವಲಯದ ಜನರು ಶಂಕಿಸಿದ್ದರು. ಆದರೆ, ಸಿಬಿಐ ತನ್ನ ತನಿಖೆಯಲ್ಲಿ ಸದ್ಯಕ್ಕೆ ಕೊಲೆಯನ್ನು ಮಾತ್ರ ದೃಢಪಡಿಸಿದೆ. “ಘಟನೆ ನಡೆದಾಗ ಮತ್ತೊಂದು ಕಳವು ಮಾಡಿದ ಆಟೋರಿಕ್ಷಾದಲ್ಲಿದ್ದ ನಾವು, ಅಮಲಿನಲ್ಲಿದ್ದೆವು” ಎಂದು ಆರೋಪಿಗಳು ಹೇಳಿಕೊಂಡಿದ್ದರು.
ಮಹಿಳಾ ಜಡ್ಜ್‌ಗೆ ನಿಂದನೆ
2015ರ ಅಕ್ಟೋಬರ್‌ನಲ್ಲಿ ನಡೆದ ಘಟನೆ. ದೆಹಲಿಯ ಮಹಿಳಾ ನ್ಯಾಯಾಧೀಶರ ವಿರುದ್ಧ ವಕೀಲರೊಬ್ಬರು ಲೈಂಗಿಕ ಧೋರಣೆಯ ಹೇಳಿಕೆಗಳನ್ನು ನೀಡಿದ್ದರು. ಪ್ರಕರಣದ ವಿಚಾರಣೆಯ ಸಮಯದಲ್ಲಿ ವಕೀಲ, ‘ಅಶ್ಲೀಲ ಮತ್ತು ನಿಂದನೀಯ ಭಾಷೆ ಬಳಸಿದ್ದಾರೆ’ ಎಂದು ಜಡ್ಜ್ ದೂರು ನೀಡಿದ್ದರು. ಅದರ ಅನ್ವಯ ಎಫ್‌ಐಆರ್ ದಾಖಲಾಗಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ವಾಹನ ಮುಟ್ಟುಗೋಲಿಗೆ ಸಂಬಂಧಿಸಿದಂತೆ ವಕೀಲರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದಾಗ, ಈ ಘಟನೆ ನಡೆದಿತ್ತು.
500 ಕೋಟಿ ಬೇಡಿಕೆಯ ಅಸಲಿ ಕಥೆ
ಕಳೆದ ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಾಲಿ ನ್ಯಾಯಾಧೀಶರೊಬ್ಬರಿಗೆ 500 ಕೋಟಿ ರೂ.ಗಳ ಬೇಡಿಕೆಯೊಂದಿಕೆ ಬೆದರಿಕೆ ಪತ್ರ ಬಂದಿತ್ತು. ಜೀವಂತವಾಗಿರಬೇಕಾದರೆ ಹಣವನ್ನು ಪಾವತಿಸಬೇಕು ಎಂದು ಹೆದರಿಸಲಾಗಿತ್ತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಸ್ಪೀಡ್ ಪೋಸ್ಟ್ ಮಾಡಲಾಗಿತ್ತು. ಇದರ ಮೂಲವನ್ನು ಪತ್ತೆ ಹಚ್ಚಲು ಹೊರಟಾಗ ಸ್ವಾರಸ್ಯಕರ ಸಂಗತಿಗಳು ಹೊರಬಿದ್ದವು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 74 ವರ್ಷದ ವೃದ್ಧನನ್ನು ಅಂತಿಮವಾಗಿ ಬಂಧಿಸಲಾಯಿತು. ತನಗೆ ಆಗದ ವ್ಯಕ್ತಿಯನ್ನು ಸಂಚಿನಲ್ಲಿ ಸಿಲುಕಿಸಲು ಈ ರೀತಿಯ ಪತ್ರವನ್ನು ಆ ವೃದ್ಧ ಬರೆದಿದ್ದ. ನ್ಯಾಯಾಧೀಶರು ಸಲ್ಲಿಸಿದ ದೂರಿನ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ರೇವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್, ವಿಶೇಷ ತಂಡವನ್ನು ರಚಿಸಿ ಪತ್ರದ ಮೂಲವನ್ನು ಪತ್ತೆಹಚ್ಚಿದರು. ಆರಂಭಿಕ ಅನುಮಾನ ಪ್ರಯಾಗ್‌ರಾಜ್ ನಿವಾಸಿ ಸಂದೀಪ್ ಸಿಂಗ್ ಮೇಲೆ ಬಿದ್ದಿತು. ಆತನ ಕೈಬರಹದ ಮಾದರಿಗಳನ್ನು ತೆಗೆದುಕೊಳ್ಳಲಾಯಿತು. ಆದರೆ ಆ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ತನಿಖೆಯಿಂದ ಗೊತ್ತಾಯಿತು.
ಪ್ರಯಾಗ್‌ರಾಜ್‌ನಲ್ಲಿರುವ ಆರ್‌ಎಂಎಸ್ ಅಂಚೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಲಾಯಿತು. ಶಂಕರ್‌ಗಢ ಪಟ್ಟಣದ ರಾಜಕೋಥಿ ನಿವಾಸಿ ದೇವರಾಜ್ ಸಿಂಗ್ ಎಂದು ಗುರುತಿಸಲಾದ ವೃದ್ಧ ವ್ಯಕ್ತಿಯೇ ಈ ಪತ್ರವನ್ನು ಕಳುಹಿಸಿದ್ದ ಎಂದು ತಿಳಿದು ಬಂದಿತು. ದೇವರಾಜ್ ಸಿಂಗ್‌ಗೆ ಸಂದೀಪ್ ಸಿಂಗ್ ಜೊತೆ ವೈಯಕ್ತಿಕ ದ್ವೇಷವಿತ್ತು. ಇಬ್ಬರ ನಡುವೆ ಜಗಳವಾಗಿತ್ತು. ವೃದ್ಧ ದೇವರಾಜ್, ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ. ಆ ಸಿಟ್ಟಿನಲ್ಲಿ ಹೀಗೆ ಪತ್ರ ಬರೆದಿದ್ದರು.
ದೆಹಲಿ ನ್ಯಾಯಾಲಯದಲ್ಲಿ ಕೊಲೆ ಬೆದರಿಕೆ
ಆರು ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣದಲ್ಲಿ ಕಳೆದ ಏಪ್ರಿಲ್‌ನಲ್ಲಿ ಶಿಕ್ಷೆಗೊಳಗಾದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಮಹಿಳಾ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ. “ನೀನು ಏನೂ ಅಲ್ಲ… ಹೊರಗೆ ಬಾ, ಜೀವಂತವಾಗಿ ಮನೆಗೆ ಹೇಗೆ ಹಿಂತಿರುಗುತ್ತೀಯ ನೋಡ್ತೀನಿ” ಎಂದಿದ್ದ.
ಇದನ್ನೂ ಓದಿರಿ: ಲಿಂಗಾಯತ ಮಠಾಧಿಪತಿಗಳ ಶಕ್ತಿ ಪ್ರದರ್ಶನ; ಸಿದ್ದರಾಮಯ್ಯಗೆ ಭರಪೂರ ಮೆಚ್ಚುಗೆ
ಹೀಗೆ ನ್ಯಾಯಾಧೀಶರಿಗೆ ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು ಈ ಹಿಂದೆಯೂ ನಡೆದಿದೆ. ಆದರೆ ಅವೆಲ್ಲ ವೈಯಕ್ತಿಕ ಕಾರಣಕ್ಕೋ ಅಥವಾ ತಮ್ಮ ಪರವಾಗಿ ತೀರ್ಪು ಬರಲಿಲ್ಲ ಎಂಬ ಸಿಟ್ಟಿಗೋ ವರ್ತಿಸಿರುವುದೇ ಹೆಚ್ಚು. ಈಗ ಚರ್ಚೆಯಲ್ಲಿರುವ ಘಟನೆಯು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ವಿರುದ್ಧ ಸೈದ್ಧಾಂತಿಕ ವಿಚಾರವಾಗಿ ನಡೆದಿರುವ ಪಿತೂರಿಯದ್ದಾಗಿದೆ. ತಮ್ಮನ್ನು ತಾವು ಬೌದ್ಧಿಸ್ಟ್ ಎಂದು ಕರೆದುಕೊಂಡಿರುವ ಬಿ.ಆರ್. ಗವಾಯಿ ವಿರುದ್ಧ ಸನಾತನಿಗಳು ವಿಕೃತವಾಗಿ ವಿಷ ಕಕ್ಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಅಂಬೇಡ್ಕರ್‌ವಾದದ ಮೇಲೆ ಇರುವ ಅಸಹನೆಯನ್ನು ತೆರೆದಿಟ್ಟಿದೆ.
