ಸಿಜೆಐ ಗವಾಯಿ ಮೇಲಿನ ಹಲ್ಲೆ ಯತ್ನವನ್ನು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಒಕ್ಕೂಟ, ಇಂತಹ ವಿಕೃತಿಗಳಿಗೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಗಳ ಮೂಲಕ ತಕ್ಕ ಉತ್ತರ ನೀಡಬೇಕೆಂದು ಕರೆ ನೀಡಿದೆ.
ಮಾಧ್ಯಮ ಹೇಳಿಕೆ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿರುವ ಗೌರವಾನ್ವಿತ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಮತಾಂಧ ಸನಾತನಿ ವಕೀಲನೊಬ್ಬ ಶೂ ಎಸೆದು ಅಪಮಾನ ಮಾಡಿರುವ ದುರ್ಘಟನೆಯನ್ನು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ. ಮತ್ತು ಇದು ಪ್ರಜಾಪ್ರಭುತ್ವ – ಸಂವಿಧಾನ ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಅತ್ಯಂತ ಹೀನಾಯವಾದ ದಾಳಿ ಎಂದು ಭಾವಿಸುತ್ತದೆ.
ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರು ಸಂವಿಧಾನದ ತತ್ವಗಳ ಆಧಾರದ ಮೇಲೆ ಅತ್ಯಂತ ಘನತೆಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಂತಹ ನ್ಯಾಯಾಧೀಶರ ಮೇಲೆ ಸನಾತನಿ ಮನಸ್ಥಿತಿಯ ವಕೀಲನೊಬ್ಬ ತೋರಿಸಿರುವ ಅಸಹನೆ ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ಜಾತೀಯತೆಯ ತಾರತಮ್ಯ ಸ್ವಾತಂತ್ರ್ಯ ನಂತರದ 75 ವರ್ಷಗಳ ನಂತರವೂ ಮತ್ತಷ್ಟು ಗಟ್ಟಿಯಾಗಿ ಉಳಿದುಕೊಂಡಿದೆ ಎನ್ನುವುದನ್ನು ತೋರಿಸುತ್ತದೆ.
ನ್ಯಾಯಮೂರ್ತಿ ಗವಾಯಿಯವರು ಸಂವಿಧಾನದ ಕರ್ತೃ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿಯಾಗಿದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ನ್ಯಾಯಮೂರ್ತಿಗಳು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಂತೆ ಎಂದೂ ವರ್ತಿಸಿಲ್ಲ. ಭಾರತದ ಸಾರ್ವಭೌಮತ್ವವನ್ನು ನ್ಯಾಯಾಂಗದಲ್ಲಿ ಎತ್ತಿ ಹಿಡಿಯುವ ಅತ್ಯಂತ ಮಹತ್ವದ ಸ್ಥಾನದಲ್ಲಿ ಕುಳಿತಿದ್ದಾರೆ. ಪ್ರತಿಯೊಬ್ಬ ಭಾರತೀಯನ ಆತ್ಮ ಗೌರವ ಮತ್ತು ಘನತೆಯನ್ನು ನ್ಯಾಯದ ದೃಷ್ಟಿಯಿಂದ ಪರಿಶೀಲಿಸಿ ಸಾಂವಿಧಾನಿಕ ಮೌಲ್ಯಗಳಿಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಅತ್ಯಂತ ಗೌರವಾನ್ವಿತ ನ್ಯಾಯಾಧೀಶರೆಂದು ಹೆಸರು ಮಾಡಿದ್ದಾರೆ.
ಇದನ್ನು ಸಹಿಸಲಾಗದ ಸದಾ ಅಸಮಾನತೆ ಮತ್ತು ತಾರತಮ್ಯವನ್ನೇ ಉಸಿರಾಡುವ ಕೋಮುವಾದಿ ಸನಾತನಿ ಮನಸ್ಸುಗಳು ಇಂತಹ ನಿಸ್ಪೃಹ ನ್ಯಾಯಾಧೀಶರ ಮೇಲೆ ದ್ವೇಷ ಕಾರುವ ಕೆಲಸಕ್ಕೆ ಮುಂದಾಗಿವೆ. ಶೂ ಎಸೆಯಲು ಪ್ರಯತ್ನಿಸಿದ ರಾಕೇಶ್ ಕಿಶೋರ್ ಎಂಬ ಮನುವಾದಿ ಮನಸ್ಸಿನ ವಕೀಲ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಬಾಗಿಸಿ ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟು ಹಾಕುತ್ತಿರುವ ಸಂಘ ಪರಿವಾರ ಮತ್ತು ಮನುವಾದದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ನಾಥುರಾಮ್ ಗೋಡ್ಸೆಯಂತ ಕೊಲೆಗಡುಕ ಮನಸ್ಥಿತಿಯ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಈ ದೂರ್ತ ವಕೀಲನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ದಸಂಸ ಒಕ್ಕೂಟ ಒತ್ತಾಯಿಸುತ್ತದೆ ಮತ್ತು ಇಂಥ ದೂರ್ತ ಮನಸ್ಥಿತಿಯ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಒಕ್ಕೂಟ ಸದಾ ಸಿದ್ಧವಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ.
ಇದನ್ನೂ ಓದಿ ಸಿಜೆಐ ಗವಾಯಿ ಪ್ರಕರಣ; ನ್ಯಾಯಾಧೀಶರ ಮೇಲಾದ ಹಲ್ಲೆಗಳು ಮುನ್ನಲೆಗೆ
ಅಂಬೇಡ್ಕರ್ ವಾದಿ ದಲಿತರೊಬ್ಬರು ಭಾರತದ ಉಚ್ಚ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಆಗಿರುವುದನ್ನು ಸಹಿಸಿಕೊಳ್ಳಲಾರದಷ್ಟು ಅಸಹನೆ ಅಸಹಿಷ್ಣುತೆ ಸನಾತನಿಗಳಲ್ಲಿ ಇದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಈ ಆರೋಪಿಯನ್ನು ಕೂಡಲೇ ನ್ಯಾಯಾಂಗ ನಿಂದನೆಗೆ ಪ್ರಕ್ರಿಯೆಗೆ ಒಳಪಡಿಸಬೇಕು ಮತ್ತು ನೀತಿ ಸಂಹಿತೆ ವಿರುದ್ಧವಾಗಿ ನಡೆದುಕೊಂಡಿದ್ದನೆಂದು ಬಾರ್ ಕೌನ್ಸಿಲ್ ನವರು ಸದರಿ ವಕೀಲನ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ದಸಂಸ ಒಕ್ಕೂಟವು ಒತ್ತಾಯಿಸುತ್ತದೆ.
ಸ್ಪೃಶ್ಯ – ಅಸ್ಪೃಶ್ಯತೆ, ಮಡಿ – ಮೈಲಿಗೆ, ಅಸಮಾನತೆ, ಜಾತೀಯತೆ, ಕೋಮು ಭಾವನೆ, ತಾರತಮ್ಯ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡು ಸದಾ ಜಾತಿ-ಜಾತಿಗಳ ನಡುವೆ ಧರ್ಮ-ಧರ್ಮಗಳ ನಡುವೆ ಜಗಳ ತಂದಿಟ್ಟು ಲಾಭ ಮಾಡಿಕೊಂಡು ನಿರಂತರವಾಗಿ ಆಳುವ ವರ್ಗವಾಗಿ ಆಧಿಪತ್ಯ ಸ್ಥಾಪಿಸಿಕೊಂಡಿರುವ ಬ್ರಾಹ್ಮಣ್ಯ ಪಾರುಪತ್ಯದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ[RSS] ಈಗ 100 ವರ್ಷ ತುಂಬಿದೆಯಂತೆ!! ಈ ಶತಮಾನೋತ್ಸವದ ಉನ್ಮಾದ ಸ್ಥಿತಿಯಲ್ಲಿರುವ ಕೋಮುವಾದಿಗಳು ಇಂಥ ಶೂ ಎಸೆತದಂತ ಅವಾಂತರಗಳು ಹಾಗೂ “ಸಂವಿಧಾನ – ಪ್ರಜಾಪ್ರಭುತ್ವ”ಕ್ಕೆ ಧಕ್ಕೆ ತರುವಂತಹ ಜಾತಿ ಗಲಭೆ – ಕೋಮು ಗಲಭೆಗಳನ್ನು ಸೃಷ್ಟಿಸಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡುವ ಕುಕೃತ್ಯದಲ್ಲಿ ತೊಡಗುವ ಅಪಾಯವಿದ್ದೇ ಇದೆ. ಹಾಗಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಪ್ರಜ್ಞಾವಂತ ಶೂದ್ರ ಜನ ಸಮುದಾಯಗಳು ಸದಾ ಎಚ್ಚರಿಕೆಯಿಂದಿದ್ದು ಪರಸ್ಪರ “ಶಾಂತಿ – ಸೌಹಾರ್ದತೆ – ಸಹಬಾಳ್ವೆ – ಏಕತೆ”ಯನ್ನು ಕಾಪಾಡಿಕೊಂಡು ಕೋಮುವಾದಿಗಳ ಇಂತಹ ವಿಕೃತಿಗಳಿಗೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಗಳ ಮೂಲಕ ತಕ್ಕ ಉತ್ತರ ನೀಡಬೇಕೆಂದು ದಸಂಸ ಒಕ್ಕೂಟವು ಕರೆ ನೀಡುತ್ತದೆ.
ಇಂದೂಧರ ಹೊನ್ನಾಪುರ
ಗುರುಪ್ರಸಾದ್ ಕೆರಗೋಡು
ಮಾವಳ್ಳಿ ಶಂಕರ್
ವಿ. ನಾಗರಾಜ
ಎನ್. ಮುನಿಸ್ವಾಮಿ
ಎನ್. ವೆಂಕಟೇಶ್