ದೇಶದಲ್ಲಿ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟವು ಕುಸಿಯುತ್ತಿದೆ ಎಂಬುದನ್ನು ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ (ಎನ್‌ಸಿಎಪಿ) ವರದಿ ಮತ್ತೊಮ್ಮೆ ಒತ್ತಿ ಹೇಳಿದೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ನಗರಗಳ ಪೈಕಿ ಇಂದೋರ್ ಉತ್ತಮ ಶುದ್ಧ ಗಾಳಿ ಹೊಂದಿರುವ ನಗರವಾಗಿದ್ದು, ಅಗ್ರ ಸ್ಥಾನ ಪಡೆದುಕೊಂಡಿದೆ. ನಮ್ಮ ರಾಜಧಾನಿ ಬೆಂಗಳೂರು 36ನೇ ಸ್ಥಾನಕ್ಕೆ ಕುಸಿದಿದೆ.
ಪ್ರತಿ ವರ್ಷವು ಎನ್‌ಸಿಎಪಿ ದೇಶದ ಹಲವಾರು ನಗರಗಳ ಗಾಳಿಯ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಈ ಪರಿಶೀಲನೆಗಾಗಿ ನಗರಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡಿದೆ. ಒಂದು) 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳು; ಎರಡು) 3-10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳು ಹಾಗೂ ಮೂರು) 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಣಗಳು.
10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 47 ನಗರಗಳನ್ನು ಎನ್‌ಸಿಎಪಿ ಮೊದಲ ವಿಭಾಗದಲ್ಲಿ ಪಟ್ಟಿ ಮಾಡಿದೆ. ಈ ನಗರಗಳ ಪೈಕಿ, ಮಾಯುಮಾಲಿನ್ಯ ತಡೆಗೆ ಭಾರೀ ಪ್ರಯತ್ನಗಳು ಮತ್ತು ಕ್ರಮಗಳನ್ನು ಜಾರಿಗೊಳಿಸಿದ್ದ ಇಂದೋರ್, ಶುದ್ಧ ಗಾಳಿ ಹೊಂದಿರುವ ನಗರವಾಗಿ ಅಗ್ರ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಮಧ್ಯಪ್ರದೇಶದ ಜಬಲ್‌ಪುರ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಆಗ್ರಾ ಮತ್ತು ಗುಜರಾತ್ ಸೂರನ್ ಸ್ಥಾನ ಪಡೆದುಕೊಂಡಿವೆ. 2023ರಲ್ಲಿ 31ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ವರ್ಷ 36ನೇ ಸ್ಥಾನಕ್ಕೆ ಕುಸಿದಿದೆ.
ಈ ಲೇಖನ ಓದಿದ್ದೀರಾ?: ‘ಆಳಂದ’ ಕ್ಷೇತ್ರದಲ್ಲಿ ಭಾರೀ ಮತ ಕಳ್ಳತನ; ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!
3–10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಅಮರಾವತಿ ಮೊದಲ ಸ್ಥಾನ, ಉತ್ತರ ಪ್ರದೇಶದ ಝಾನ್ಸಿ ಮತ್ತು ಮೊರಾದಾಬಾದ್ ಎರಡನೇ ಸ್ಥಾನ ಹಾಗೂ ರಾಜಸ್ಥಾನದ ಅಲ್ವರ್ ಮೂರನೇ ಸ್ಥಾನ ಪಡೆದುಕೊಂಡಿವೆ.
ಇನ್ನು, 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂಗಿರುವ ನಗರಗಳ ವಿಭಾಗದಲ್ಲಿ ಮೊದಲನೇ ಸ್ಥಾನವನ್ನು ಮಧ್ಯಪ್ರದೇಶದ ದೇವಾಸ್, ಎರಡನೇ ಸ್ಥಾನವನ್ನು ಹಿಮಾಚಲ ಪ್ರದೇಶದ ಪರ್ವಾನೋ ಹಾಗೂ ಮೂರನೇ ಸ್ಥಾನವನ್ನು ಒಡಿಶಾದ ಅನುಗುಲ್ ಪಡೆದುಕೊಂಡಿವೆ.
ಗಮನಾರ್ಹವೆಂದರೆ, ಈ ಮೂರೂ ವಿಭಾಗಗಳಲ್ಲಿಯೂ ಕರ್ನಾಟಕದ ಯಾವುದೇ ನಗರ/ಪಟ್ಟಣವು ಶುದ್ಧ ಗಾಳಿ ಹೊಂದಿರುವ ಮೊದಲ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕಲವು ನಗರಗಳು ಕೈಗಾರಿಕಾ ಕೇಂದ್ರಗಳಾಗಿವೆ. ಕಲ್ಲಿದ್ದಲು ಗಣಿಗಾರಿಕೆಯನ್ನೂ ಹೊಂದಿವೆ. ಆದರೂ, ವಾಯುಮಾಲಿನ್ಯವನ್ನು ತಡೆಯುವಲ್ಲಿ ಸಫಲವಾಗಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.