ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ತಿನಿಸು ಅಂಗಡಿಗಳು ಬಳಸುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳು ಸೋಮವಾರದಿಂದ ಇನ್ನಷ್ಟು ದುಬಾರಿಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಸಿಲಿಂಡರ್ಗೆ ₹42 ಹೆಚ್ಚಳ ಮಾಡಿವೆ. ಸದ್ಯ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ₹3,071.50ಯಿಂದ ₹3,113.50ಗೆ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿಯೂ ದರ ಏರಿಕೆಯಾಗಿದೆ. ಚೆನ್ನೈನಲ್ಲಿ ₹46 ಹೆಚ್ಚಳ ಮತ್ತು ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್ಗೆ ₹53.50ಯಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು ₹42 ರಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ಬಳಿಕ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯು ₹3,198.00 ಆಗಿದೆ.
ಇದನ್ನು ಓದಿದ್ದೀರಾ? ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 993 ರೂ. ಏರಿಕೆ! ಬೆಂಗಳೂರಿನಲ್ಲಿ ದರವೆಷ್ಟು?
ಈ ವರ್ಷದ ಆರಂಭದಿಂದಲೂ ವಾಣಿಜ್ಯ ಎಲ್ಪಿಜಿ ಬೆಲೆಗಳು ತೀವ್ರ ಏರಿಕೆ ಕಂಡಿವೆ. ಇದರಿಂದಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಆಹಾರ ವ್ಯವಹಾರಗಳ ಕಾರ್ಯಾಚರಣೆ ವೆಚ್ಚ ಗಮನಾರ್ಹವಾಗಿ ಹೆಚ್ಚಾಗಿವೆ. ಇದರ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿವೆ.
ಫೆಬ್ರವರಿಯಲ್ಲಿ 49 ರೂ. ಮತ್ತು ಮಾರ್ಚ್ನಲ್ಲಿ 115 ರೂ. ಹೆಚ್ಚಿಸಲಾಗಿದೆ. ಏಪ್ರಿಲ್ನಲ್ಲಿ ವಾಣಿಜ್ಯ ಎಲ್ಪಿಜಿ ದರಗಳು ಸಿಲಿಂಡರ್ಗೆ 993 ರೂ.ಗಳಷ್ಟು ಅಂದರೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಮೇ ತಿಂಗಳಲ್ಲೂ ಬೆಲೆ ಏರಿಸಲಾಗಿದೆ. ಜೂನ್ನಲ್ಲಿ ಮತ್ತೆ ದರ ಏರಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಮತ್ತು ಅನಿಲದ ಬೆಲೆ ಏರಿಕೆ ಕಾಣುತ್ತಿದೆ. ಈ ನಡುವೆ ದೇಶದಲ್ಲಿ ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರಗಳು ಹೆಚ್ಚಿಸುತ್ತಿವೆ.



