2011ರಲ್ಲಿ ಸೌಮ್ಯಾ ಎಂಬ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದ ಅಪರಾಧಿ ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಅಪರಾಧಿ ಗೋವಿಂದಚಾಮಿ ಜೈಲಿನಿಂದ ‘ಎಸ್ಕೇಪ್’ ಆಗಿದ್ದಾನೆ.
ಪ್ರತಿದಿನ ನಡೆಯುವಂತೆ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳನ್ನು ತಪಾಸಣೆ ನಡೆಸುವಾಗಿ ಆತ ನಾಪತ್ತೆಯಾಗಿರುವುದು ಜೈಲು ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಜೈಲು ಆವರಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದ್ದಾರೆ. ಆದರೆ, ಆತ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಗೋವಿಂದಚಾಮಿ ಹೇಗೆ ತಪ್ಪಿಸಿಕೊಂಡ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಸದ್ಯ, ಆತನನ್ನ ಹಿಡಿಯಲು ಹುಡುಕಾಟ ನಡೆಯುತ್ತಿದೆ. ಶೀಘ್ರವೇ ಆತನನ್ನು ಬಂಧಿಸುತ್ತೇವೆ ಎಂದು ಕಣ್ಣೂರು ಪೊಲೀಸರು ತಿಳಿಸಿದ್ದಾರೆ.
ಅಪರಾಧಿ ತಪ್ಪಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಿಡಿಸಿರುವ ಸೌಮ್ಯಾ ಅವರ ತಾಯಿ, “ಕಣ್ಣೂರು ಜೈಲು ಬಹಳ ದೊಡ್ಡದು. ಯಾರ ಬೆಂಬಲವೂ ಇಲ್ಲದೆ ಅಲ್ಲಿಂದ ಆತನ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆತನಿಗೆ ಯಾರೋ ನೆರವು ನೀಡಿದ್ದಾರೆ. ಆತನನ್ನು ತಕ್ಷಣ ಪತ್ತೆ ಹಚ್ಚಬೇಕು” ಎಂದು ಒತ್ತಾಯಿಸಿದ್ದಾರೆ.
2011ರ ಫೆಬ್ರವರಿ 1ರಂದು 23 ವರ್ಷದ ಸೌಮ್ಯಾ ಎಂಬ ಯುವತಿ ಎರ್ನಾಕುಲಂನಿಂದ ಶೋರನೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಕೆಯನ್ನು ಹಿಂಬಾಲಿಸಿದ್ದ ಅಪರಾಧಿ ಗೋವಿಂದಚಾಮಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಪ್ರಕರಣ ಸಾಬೀತಾದ ಬಳಿಕ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕಣ್ಣೂರು ಜೈಲಿನಲ್ಲಿ ಇರಿಸಲಾಗಿತ್ತು.