ಮಹಾರಾಷ್ಟ್ರ ಕರಾವಳಿ ಭಾಗಕ್ಕೆ ಶಕ್ತಿ ಚಂಡಮಾರುತ ಅಪ್ಪಳಿಸಲಿದೆ. ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮತ್ತು ಮಳೆ ಬೀಸುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿಯೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಸೂಚನೆ ನೀಡಿದೆ.
ಅಕ್ಟೋಬರ್ 4 ಮತ್ತು 7ರ ನಡುವೆ ಬೃಹತ್ ಮತ್ತು ಮಧ್ಯಮ ಚಂಡಮಾರುತ ಬೀಸಲಿದೆ. ಮುಂಬೈ, ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಲಿದೆ. ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಗಾಳಿಯ ವೇಗವು ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ.ವರೆಗೆ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ಪೂರ್ವ ಪ್ರದೇಶಗಳಾದ ವಿದರ್ಭ ಮತ್ತು ಮರಾಠವಾಡದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಜಿಲ್ಲಾಡಳಿತಗಳು ತಮ್ಮ ವಿಪತ್ತು ನಿರ್ವಹಣಾ ತಂಡಗಳನ್ನು ಸಕ್ರಿಯಗೊಳಿಸಬೇಕು. ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು, ಸಮುದ್ರ ಪ್ರಯಾಣ ನಡೆಸದಂತೆ ಸೂಚಿಸಬೇಕು ಎಂದು ಸರ್ಕಾರ ಮತ್ತು ಜಿಲ್ಲಾಡಳಿತಗಳಿಗೆ ಇಲಾಖೆ ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
ಕರ್ನಾಟಕದಲ್ಲಿಯೂ ಭಾರೀ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಹೆಚ್ಚು ಮಳೆ ಸುರಿಯಲಿದೆ.