ಸವರ್ಣೀಯ ಗುಂಪು ದಲಿತ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೌರ್ಜನ್ಯವೆಸಗಿದ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರು ಮಂದಿ ಗುಂಪು ಶ್ಯಾಮ್ ಕುಮಾರ್ ಅವರನ್ನು ನಾಲ್ಕು ಗಂಟೆಗಳ ಕಾಲ ಕಾಲ ಥಳಿಸಿದ್ದು, ನೀರು ಕೇಳಿದಾಗ ಆರೋಪಿಗಳು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಮುನ್ನೆಲೆಗೆ ಬಂದ ನಂತರ, ಟಿಡಿಪಿ ಪರಿಶಿಷ್ಟ ಜಾತಿ ಘಟಕ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದೆ.
ಟಿಡಿಪಿ ಎಸ್‌ಸಿ ಘಟಕದ ಅಧ್ಯಕ್ಷ ಎಂಎಂಎಸ್ ರಾಜು ನೇತೃತ್ವದಲ್ಲಿ ಕಂಚಿಕಚಾರ್ಲ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದ್ದು, ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರವೆಸಗಿ, ತುಂಡುತುಂಡಾಗಿ ಕತ್ತರಿಸಿ ಭೀಕರ ಹತ್ಯೆ
ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಂಎಸ್ ರಾಜು, ”ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ದಲಿತರ ಮೇಲೆ ಸಾಕಷ್ಟು ದಾಳಿಗಳು ನಡೆಯುತ್ತಿವೆ. ಶ್ಯಾಮ್ ಕುಮಾರ್ ಎಂಬ ಬಾಲಕನ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ಹಲ್ಲೆ ನಡೆಸಲಾಗಿದೆ. ತೀವ್ರ ಗಾಯಗೊಂಡಿರುವ ಶ್ಯಾಮ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಯನ್ನು ಪ್ರತಿಭಟನಾಕಾರರು ಕೂಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಪ್ರತಿಭಟನೆಯನ್ನು ನಿಲ್ಲಿಸಲು ಮತ್ತು ಜನಸಂದಣಿಯನ್ನು ರಸ್ತೆಯಿಂದ ತೆರವುಗೊಳಿಸಲು ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರತಿಭಟನಾಕಾರರೊಬ್ಬರನ್ನು ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ.
ವಿಜಯವಾಡ ನಗರ ಪೊಲೀಸ್ ಕಮಿಷನರ್ ಕಂಠಿ, ”ಕಂಚಿಕಚೆರ್ಲಾ ಗ್ರಾಮದ ನಿವಾಸಿ ಶ್ಯಾಮ್ ಕುಮಾರ್ ಎಂಬ ದಲಿತ ಯುವಕನ ಮೇಲೆ ಆತನ ಹಳೆಯ ಸ್ನೇಹಿತ ಹರೀಶ್ ರೆಡ್ಡಿ ಎಂಬುವರು ಇತರ ಐವರು ಸೇರಿ ಹಲ್ಲೆ ನಡೆಸಿದ್ದಾರೆ.ಆರೋಪಿಗಳನ್ನು ತ್ವರಿತ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆಯಲಾಗುವುದು” ಎಂದು ತಿಳಿಸಿದ್ದಾರೆ.