ದನ ಕೊಂದ ಆರೋಪದ ಮೇಲೆ 35 ವರ್ಷದ ದಲಿತ ಯುವಕನಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ಒಡಿಶಾದ ದಿಯೋಗಢ ಜಿಲ್ಲೆಯ ಕುಂಡೇಜುರಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕೌನ್ಸಿಧಿಪ ಗ್ರಾಮದ ಕಿಶೋರ್ ಚಮರ್ ಎಂದು ಗುರುತಿಸಲಾಗಿದ್ದು, ದನಗಳ ಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಕಿಶೋರ್ ಸಹೋದ್ಯೋಗಿ ಗೌತಮ್ ನಾಯಕ್ ಚಿಕಿತ್ಸೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಒಡಿಶಾ | ಅಲೆಮಾರಿ ಕುಟುಂಬದ ಐವರ ಬರ್ಬರ ಹತ್ಯೆ; ಐವರ ಅಪಹರಣ
ಚಮರ್ ಮತ್ತು ನಾಯಕ್ ದನವನ್ನು ಕತ್ತರಿಸುತ್ತಿದ್ದಾಗ ಗುಂಪೊಂದು ಸ್ಥಳಕ್ಕೆ ಧಾವಿಸಿದೆ. ಸ್ವಾಭಾವಿಕವಾಗಿ ಸತ್ತ ದನದ ಚರ್ಮ ಸುಲಿಯುತ್ತಿದ್ದರಷ್ಟೇ ಎಂದು ಇಬ್ಬರು ವಿವರಿಸಿದರೂ, ಗುಂಪು ದನ ಕೊಂದ ಆರೋಪ ಮಾಡಿದೆ.
ಎರಡು ತಿಂಗಳ ಹಿಂದೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಪ್ರಕರಣ ನಡೆದಿದೆ. ಬಾಬುಲಾ ನಾಯಕ್ (54) ಮತ್ತು ಬುಲು ನಾಯಕ್ (42) ಎಂಬ ಇಬ್ಬರು ದಲಿತರನ್ನು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಗುಂಪೊಂದು ಹಲ್ಲೆ ನಡೆಸಿ ಅವಮಾನಿಸಿದೆ. ದಾಳಿ ಮಾಡಿದವರು 30 ಸಾವಿರ ರೂಪಾಯಿ ಹಣ ಕೇಳಿದ್ದು, ಹಣ ನೀಡಲು ನಿರಾಕರಿಸಿದಾಗ ಗುಂಪು ಥಳಿಸಿದೆ, ಹುಲ್ಲು ತಿನ್ನಿಸಿದೆ.
