ನಟಿ ರಿಯಾ ಚಕ್ರವರ್ತಿ ಅವರ ಸಂದರ್ಶನ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಟಿವಿ ಟುಡೇ ಚಾನೆಲ್ ಮತ್ತು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ ವಿರುದ್ಧ ಮಾನಹಾನಿಕರ ಟ್ವೀಟ್ ಮಾಡಿದ್ದ ಅನುರಾಗ್ ಶ್ರೀವಾಸ್ತವ ಎಂಬ ವ್ಯಕ್ತಿ ಟಿವಿ ಟುಡೇಗೆ ₹5 ಲಕ್ಷ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಟ್ವೀಟ್‌ಗಳು ಅತ್ಯಂತ ಮಾನಹಾನಿಕರವಾಗಿದ್ದು ಅಂತಹ ಟ್ವೀಟ್‌ಗಳಿಂದ ವರ್ಚಸ್ಸಿಗೆ ಆದ ಹಾನಿ ಸರಿಪಡಿಸಲು ಟಿವಿ ಟುಡೇಗೆ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ತೀರ್ಪು ನೀಡಿದರು.
ಟ್ವೀಟ್‌ಗಳು ಅತಿ ಮಾನಹಾನಿಕರವಾಗಿದ್ದು ಪ್ರತಿವಾದಿ ಮಾಡಿದ ಆರೋಪಗಳು ಆಧಾರರಹಿತವಾಗಿವೆ ಎಂದು ನ್ಯಾಯಾಲಯ ಕಂಡುಕೊಂಡಿದೆ. ಆಧಾರ ಒದಗಿಸುವಂತೆ ಸಾಕಷ್ಟು ಅವಕಾಶ ನೀಡಿದ್ದರೂ ಪ್ರತಿವಾದಿಯ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದನ್ನು ಖಂಡಿಸಬೇಕಾಗಿದೆ. ಪ್ರತಿವಾದಿಯ ನಡೆಯಿಂದ ಉಂಟಾದ ವರ್ಚಸ್ಸಿಗೆ ಧಕ್ಕೆ, ಭಾವನಾತ್ಮಕ ಸಂಕಷ್ಟ ಹಾಗೂ ವೃತ್ತಿಪರ ವಿಶ್ವಾಸಾರ್ಹತೆಗೆ ಹಾನಿ ಸರಿಪಡಿಸಲು ಅರ್ಜಿದಾರರಿಗೆ ₹ 5,00,000 ಪರಿಹಾರ ನೀಡುವುದು ನ್ಯಾಯಯುತ ಎಂದು ಸೆಪ್ಟೆಂಬರ್ 3ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಅನುರಾಗ್ ಶ್ರೀವಾಸ್ತವ ಎಂಬ ಟ್ವಿಟರ್ ಖಾತೆದಾರರು ತಮ್ಮ ‘@theanuragkts’ ಮತ್ತು ‘@theanuragoffice’ ಟ್ವಿಟರ್ ಖಾತೆಗಳಿಂದ 2020 ರಲ್ಲಿ ಟಿವಿ ಟುಡೇ ಮತ್ತು ಅದರ ನಿರೂಪಕರಾದ ರಾಜ್‌ದೀಪ್ ಸರ್ದೇಸಾಯಿ ಅವರನ್ನು ಗುರಿಯಾಗಿಸಿಕೊಂಡು ಕೆಲ ಟ್ವೀಟ್‌ಗಳನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ, 2020 ರಲ್ಲಿ ಟಿವಿ ಟುಡೇ ಸಲ್ಲಿಸಿದ ಮಾನಹಾನಿ ಮೊಕದ್ದಮೆ ದಾಖಲಿಸಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ
2020ರಲ್ಲಿ ಸರ್ದೇಸಾಯಿ ಮತ್ತು ರಿಯಾ ಚಕ್ರವರ್ತಿ ನಡೆಸಿದ ಸಂದರ್ಶನವನ್ನು ಟಿವಿ ಟುಡೇ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಅವಹೇಳನಕಾರಿ ಟ್ವೀಟ್‌ಗಳನ್ನು ಮಾಡಲಾಗಿತ್ತು.
ಶ್ರೀವಾಸ್ತವ ಅವರು ಸರ್ದೇಸಾಯಿ ಅವರನ್ನು ದಲ್ಲಾ (ತಲೆಹಿಡುಕ) ಎಂದು ನಿಂದಿಸಿದ್ದರು. ಅಲ್ಲದೆ ಅವರನ್ನು ಭಯೋತ್ಪಾದನೆ ಆರೋಪಿ ಜಾಕೀರ್ ನಾಯಕ್ ಅವರೊಂದಿಗೆ ಹೋಲಿಸಲಾಗಿತ್ತು. RIP 4th Pillar of Democracy ಎಂಬ ಹೇಳಿಕೆಯೊಡನೆ ರಿಯಾ ಚಕ್ರವರ್ತಿ ಅವರು ಸಂದರ್ಶನ ನಡೆಸಲೆಂದು ಸರ್ದೇಸಾಯಿ ಹಾಗೂ ಇಂಡಿಯಾ ಟುಡೇಗೆ ಲಂಚ ಕೊಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು. ಜೊತೆಗೆ #ShameOnAajTak ಎಂಬ ಹ್ಯಾಶ್‌ಟ್ಯಾಗ್ ಬಳಸಲಾಗಿತ್ತು.
ಟ್ವೀಟ್‌ನಿಂದಾಗಿ ತನ್ನ ವರ್ಚಸ್ಸಿನ ಜೊತೆಗೆ ಆರ್ಥಿಕ ಸ್ಥಿತಿಗೂ ಧಕ್ಕೆಯಾಗಿದೆ ಎಂದು ಟಿವಿ ಟುಡೇ ವಾದಿಸಿತು. ಉದಾಹರಣೆಗೆ: ಅದರ ಆದಾಯವು 2019–20ರಲ್ಲಿ ₹899.57 ಕೋಟಿ ಇತ್ತು, ಆದರೆ 2020–21ರಲ್ಲಿ ₹819.92 ಕೋಟಿಗೆ ಇಳಿದಿದೆ ಎಂದು ಅದು ಹೇಳಿತು.
ಶ್ರೀವಾಸ್ತವ ಅವರು ಅಂತಿಮವಾಗಿ ಟ್ವೀಟ್ ಅಳಿಸಿಹಾಕಿದ್ದರು. ಜೊತೆಗೆ ಅವುಗಳನ್ನು ಮರು ಪೋಸ್ಟ್ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. 2020ರಲ್ಲಿ ಹೊರಡಿಸಿದ ಮಧ್ಯಂತರ ಆದೇಶದ ಮೂಲಕ ನ್ಯಾಯಾಲಯ ಅಂತಹ ವಸ್ತುವಿಷಯವನ್ನು ಪ್ರಕಟಿಸದಂತೆಯೂ ಅವರನ್ನು ನಿರ್ಬಂಧಿಸಿತ್ತು. ಇದೀಗ ಅವಹೇಳನಕಾರಿ ಟ್ವೀಟ್‌ಗಳಿಗಾಗಿ ಟಿವಿ ಟುಡೇಗೆ ₹5 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.