ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ತೀವ್ರ ಕಳಕಳಿಯಿಂದ ಈ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಪರಮೇಶ್ವರ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಹೊಣೆಗಾರಿಕೆಯ ಕೊರತೆಯಿಂದ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳ ಪರಿಶ್ರಮದೊಂದಿಗೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೂ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಆಡಳಿತ ಮತ್ತು ಯುವಜನತೆಯ ನಡುವಿನ ನಂಬಿಕೆಯ ಕುಸಿತವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಸೇರಿದಂತೆ ಬಲಪ್ರಯೋಗ ನಡೆಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಬದಲು ಅವರ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಭಟನೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆ ನಡೆದಿರುವ ಆರೋಪ, ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಆಡಳಿತ ನಿರ್ಲಕ್ಷಿಸಿರುವ ವಿಚಾರಗಳನ್ನು ಉಲ್ಲೇಖಿಸಿರುವ ಅವರು, ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಧೋರಣೆ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಪಾರದರ್ಶಕತೆ, ನ್ಯಾಯಸಮ್ಮತ ಅವಕಾಶ ಮತ್ತು ಜನರ ನಂಬಿಕೆಯ ಮೇಲೆ ನಿಂತಿದೆ. ಪರೀಕ್ಷಾ ಅಕ್ರಮಗಳು ಮತ್ತು ಸಂಸ್ಥೆಗಳ ವೈಫಲ್ಯಗಳು ದೇಶದ ಜಾಗತಿಕ ಗೌರವಕ್ಕೂ ಧಕ್ಕೆ ಉಂಟುಮಾಡುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಆಗ ‘ಜಿರಳೆ’ ಎಂಬ ಚುಚ್ಚುಮಾತು, ಈಗ ಸಮಯವಿಲ್ಲವೆಂಬ ನಿರ್ಲಕ್ಷ್ಯ: ಪ್ರತಿಭಟನೆಯ ಬೆಂಕಿಗೆ ತುಪ್ಪ ಸುರಿದರೆ ಸಿಜೆಐ?
ಪರಮೇಶ್ವರ್ ಅವರು ಮೋದಿಯವರ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು
- ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಹಿಂತೆಗೆದು ಪಾರದರ್ಶಕತೆ ಮತ್ತು ಅರ್ಹತೆ ಆಧಾರಿತ ಸಿಇಟಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು.
- ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕಾಲಮಿತಿಯೊಳಗೆ ಪಾರದರ್ಶಕ ತನಿಖೆ ನಡೆಸಬೇಕು.
- ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ಸಂಬಂಧಪಟ್ಟ ಎಲ್ಲರೊಂದಿಗೆ ಸಂವಾದ ನಡೆಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು.
- ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕದೆ ಸಂವಾದ ಮತ್ತು ಸಹಾನುಭೂತಿಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು.
- ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪರೀಕ್ಷಾ ವ್ಯವಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ರಾಷ್ಟ್ರೀಯ ಮಟ್ಟದ ಅಭಿಯಾನ ರೂಪಿಸಬೇಕು.
- ನಾಗರಿಕರು, ವಿಶೇಷವಾಗಿ ಯುವಜನರಿಗೆ ಇರುವ ಶಾಂತಿಯುತ ಪ್ರತಿಭಟನೆಯ ಸಾಂವಿಧಾನಿಕ ಹಕ್ಕನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು.
ಯುವಕರು ಸರ್ಕಾರದಿಂದ ಉಪಕಾರ ಅಥವಾ ಸವಲತ್ತುಗಳನ್ನು ಕೇಳುತ್ತಿಲ್ಲ. ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆಗಳು, ನ್ಯಾಯಯುತ ಅವಕಾಶಗಳು ಹಾಗೂ ಜನರ ಧ್ವನಿಯನ್ನು ಆಲಿಸುವ ಪ್ರಜಾಪ್ರಭುತ್ವವನ್ನು ಮಾತ್ರ ಬಯಸುತ್ತಿದ್ದಾರೆ ಎಂದು ಪರಮೇಶ್ವರ್ ಪತ್ರದಲ್ಲಿ ಹೇಳಿದ್ದಾರೆ. ಭಾರತದ ಯುವಜನತೆಯ ಆಕಾಂಕ್ಷೆಗಳನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.





