ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19 ವರ್ಷ) ನಾಪತ್ತೆಯಾಗಿದ್ದಾರೆ. ಅವರು ಕೊನೆಯದಾಗಿ ಸಿಗ್ನೇಚರ್ ಬ್ರಿಡ್ಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆನಂತರ ಅವರು ಕಾಣೆಯಾಗಿದ್ದಾರೆ ಆಕೆಗಾಗಿ ಶೋಧ ನಡೆಯುತ್ತಿದೆ. ಆದಾಗ್ಯೂ, ಬ್ರಿಡ್ಜ್‌ನಲ್ಲಿನ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಸ್ನೇಹ ಅವರು ಮೂಲತಃ ತ್ರಿಪುರಾದವರು. ನಿವೃತ್ತ ಸೇನಾಧಿಕಾರಿ ಮೇಜರ್ ಪ್ರಿತೀಶ್ ದೇಬ್ನಾಥ್ ಅವರ ಪುತ್ರಿ. ಸ್ನೇಹಾ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದರು. ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಆತ್ಮ ರಾಮ್ ಸನಾತನ ಧರ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜುಲೈ 7ರಂದು ತಮ್ಮ ಸ್ನೇಹಿತೆಯನ್ನು ಸರೈ ರೋಹಿಲ್ಲಾ ರೈಲು ನಿಲ್ದಾಣಕ್ಕೆ ‘ಡ್ರಾಪ್’ ಮಾಡಲು ಹೋಗಿದ್ದ ಸ್ನೇಹಾ, ಅಂದಿನಿಂದ ಕಾಣೆಯಾಗಿದ್ದಾರೆ.
ಸ್ನೇಹಾಗಾಗಿ ಅವರ ಕುಟುಂಬದ ಸದಸ್ಯರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆಕೆಯನ್ನು ಹುಡುಕನ್ನು ಸಹಾಯಕ್ಕಾಗಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಕೆಯ ಹುಡುಕಾಟಕ್ಕೆ ನೆರವಾಗುವಂತೆ ತ್ರಿಪುರಾ ಪೊಲೀಸರಿಗೆ ಅಲ್ಲಿನ ಮುಖ್ಯಮಂತ್ರಿ ಮಾಣಿಕ್ ಸಹಾ ಸೂಚಿಸಿದ್ದಾರೆ.
ಜುಲೈ 7ರಂದು ಬೆಳಗ್ಗೆ 5:56ಕ್ಕೆ ತನ್ನ ತಾಯಿಗೆ ಕರೆ ಮಾಡಿದ್ದ ಸ್ನೇಹಾ, ತನ್ನ ಸ್ನೇಹಿತೆಯನ್ನು ಸರಳ್ ರೋಹಿಲ್ಲಾ ರೈಲು ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗುತ್ತಿರುವುದಾಗಿ ಹೇಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
“ನಾವು ಮತ್ತೆ ಬೆಳಿಗ್ಗೆ 8.45ಕ್ಕೆ ಕರೆ ಮಾಡಿದೆವು. ಆಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಆಕೆಯ ಸ್ನೇಹಿತೆ ಸ್ನೇಹಾಳನ್ನು ಬೆಳಿಗ್ಗೆ ಭೇಟಿಯಾಗಿಲ್ಲವೆಂದು ನಮಗೆ ತಿಳಿಯಿತು. ಕ್ಯಾಬ್ ಚಾಲಕನನ್ನು ಸಂಪರ್ಕಿಸಿದಾಗ, ಆಕೆಯನ್ನು ರೈಲ್ವೆ ನಿಲ್ದಾಣದ ಬದಲಾಗಿ, ಯಮುನಾ ನದಿ ಮೇಲೆ ಕಟ್ಟಲಾಗಿರುವ ಸಿಗ್ನೇಚರ್ ಬ್ರಿಡ್ಜ್‌ನಲ್ಲಿ ಇಳಿಸಿದ್ದಾಗಿ ತಿಳಿಯಿತು. ಇದು ನಮಗೆ ಗಾಬರಿಯಾಯಿತು. ಅಲ್ಲಿ ಒಂದೇ ಒಂದು ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲಿ ಏನಾದರೂ ಯಾರಿಗೂ ಗೊತ್ತಾಗುವುದಿಲ್ಲ” ಎಂದು ಕುಟುಂಬವು ಹೇಳಿದೆ.
“ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಸ್ನೇಹಾ ಕೊನೆಯದಾಗಿ ಕಾಣಿಸಿಕೊಂಡ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದೆ. ಆದರೆ, ಸ್ನೇಹಾಳ ಯಾವುದೇ ಕುರುಹು ಪತ್ತೆಯಾಗಿಲ್ಲ. ಅವಳ ಬಳಿ ಯಾವುದೇ ವಸ್ತುಗಳು ಇರಲಿಲ್ಲ. ಅವಳ ಫೋನ್ ಮಾತ್ರ ಇತ್ತು. ಸ್ನೇಹಾ 4 ತಿಂಗಳಿನಿಂದ ಯಾವುದೇ ಹಣವನ್ನು ವಿತ್‌ಡ್ರಾ ಮಾಡಿಲ್ಲ” ಎಂದು ಕುಟುಂಬ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ʼಗುಜರಾತ್ ಮಾಡೆಲ್ʼ : ಸುಳ್ಳಿನ ಸೌಧ ಕುಸಿಯುತ್ತಿದೆ, ಬಿಜೆಪಿ ಬೆತ್ತಲಾಗುತ್ತಿದೆ!
“ಸ್ನೇಹಾ ಕಾಣೆಯಾದ 48 ಗಂಟೆಗಳಿಗೂ ಹೆಚ್ಚು ಸಮಯದ ನಂತರ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ. ಸಿಗ್ನೇಚರ್ ಸೇತುವೆಯ ಮೇಲೆ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದರೆ, ನಮ್ಮ ಮಗಳಿಗೆ ಏನಾಯಿತು ಎಂಬುದು ನನಗೆ ಗೊತ್ತಾಗುತ್ತಿತ್ತು” ಎಂದು ಕುಟುಂಬವು ಹೇಳಿದೆ.
ಇದು ಸ್ನೇಹಾಳ ವಿಚಾರ ಮಾತ್ರವಲ್ಲ, ದೆಹಲಿಯ ನಗರದ ಪ್ರತಿಯೊಬ್ಬ ಯುವತಿಯ ಸುರಕ್ಷತೆ ಮತ್ತು ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ರಾಷ್ಟ್ರ ರಾಜಧಾನಿಯಿಂದ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಕಣ್ಮರೆಯಾಗಿದ್ದು, 96 ಗಂಟೆಗಳಿಗೂ ಹೆಚ್ಚು ಸಮಯ ಕಳೆದರೂ ಆಕೆಯ ಸುಳಿವು ಸಿಕ್ಕಿಲ್ಲ. ಸ್ನೇಹಾ ಮತ್ತೊಬ್ಬ ಕಾಣೆಯಾಗಿ ಪತ್ತೆಯಾಗದವರ ಪಟ್ಟಿಗೆ ಸೇರಲು ಬಿಡಬೇಡಿ. ಆಕೆಯನ್ನು ಹುಡುಕಿ ಕೊಡಿಯೆಂದು ನಾವು ಸಾರ್ವಜನಿಕರು, ಮಾಧ್ಯಮಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ” ಎಂದು ಕುಟುಂಬವು ತನ್ನ ಹೇಳಿಕೆಯಲ್ಲಿ ಕೋರಿಕೊಂಡಿದೆ.
ಸ್ನೇಹಾ ಅವರ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ.