ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಹಿರಿಯ ಅಧಿಕಾರಿಯನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ. 2019ರಲ್ಲಿ ಬೆಂಗಳೂರು ಮೂಲದ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಚಿನ್ನದ ಲೇಪನಕ್ಕಾಗಿ ಚಿನ್ನ ಲೇಪಿತ ತಾಮ್ರ ಹಸ್ತಾಂತರಿಸುವಾಗ ತಾಮ್ರವೆಂದೇ ಉಲ್ಲೇಖಿಸಿದ ಆರೋಪದ ಮೇಲೆ ಉಪ ದೇವಸ್ವಂ ಆಯುಕ್ತ ಬಿ ಮುರಾರಿ ಬಾಬು ಅವರನ್ನು ಅಮಾನತುಗೊಳಿಸಲಾಗಿದೆ.
ಈ ಪ್ರಕರಣ ನಡೆದ ಸಂದರ್ಭದಲ್ಲಿ ಬಾಬು ಅವರು ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ‘ದ್ವಾರಪಾಲಕ’ (ರಕ್ಷಕ) ವಿಗ್ರಹಗಳ ಚಿನ್ನ ಲೇಪಿತ ತಾಮ್ರವನ್ನು ಬರೀ ತಾಮ್ರವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಅಧಿಕಾರಿಯ ಗಂಭೀರ ಲೋಪವಿದೆ ಎಂದು ಮಂಗಳವಾರ ನಡೆದ ದೇವಸ್ವಂ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನು ಓದಿದ್ದೀರಾ? ಹಾವೇರಿ | ಮಿನಿಬಸ್ ಅಪಘಾತ; ಶಬರಿಮಲೆಗೆ ತೆರಳುತ್ತಿದ್ದ ಹಲವರಿಗೆ ಗಾಯ, ಓರ್ವ ಸಾವು
“ಗರ್ಭಗುಡಿಯ ಬಾಗಿಲಿನ ಎರಡೂ ಬದಿಯಲ್ಲಿರುವ ‘ದ್ವಾರಪಾಲಕ’ ವಿಗ್ರಹಗಳಿಗೆ ತೆಳುವಾದ ಚಿನ್ನದ ಲೇಪನವನ್ನು ಮಾತ್ರ ಹಾಕಲಾಗಿತ್ತು. 1998ರಲ್ಲಿ ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ಪ್ರಾಯೋಜಕತ್ವದಲ್ಲಿ ಗರ್ಭಗುಡಿಗೆ ಚಿನ್ನ ಲೇಪಿಸಲಾಗಿತ್ತು. ಅದು ಸವೆದುಹೋಗಿ ಬರೀ ತಾಮ್ರದ ತಟ್ಟೆ ಮಾತ್ರ ಉಳಿದಿತ್ತು. ಮೂಲ ಲೋಹ ತಾಮ್ರವಾಗಿರುವ ಕಾರಣದಿಂದಾಗಿ ತಾಮ್ರವೆಂದೇ ಉಲ್ಲೇಖಿಸಲಾಗಿದೆ” ಎಂದು ಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ ಈ ನಡುವೆ ಚಿನ್ನದ ಲೇಪನದ ದುರುಪಯೋಗ ಮಾಡಿದ ಅನುಮಾನ ವ್ಯಕ್ತವಾಗಿದೆ. 1998ರಲ್ಲಿ ಬಾಗಿಲುಗಳಿಗೂ ಚಿನ್ನದ ಲೇಪನ ಮಾಡಲಾಗಿದ್ದರೂ, ಬಾಗಿಲು ಬಿರುಕುಬಿಟ್ಟ ಕಾರಣ 2019ರಲ್ಲಿ ದೇವಾಲಯಕ್ಕೆ ಹೊಸ ಚಿನ್ನದ ಲೇಪಿತ ಬಾಗಿಲುಗಳನ್ನು ಮಾಡಲಾಗಿತ್ತು. ಆದರೆ ಇಲ್ಲಿ ಚಿನ್ನ ನಾಪತ್ತೆಯಾಗಿದೆ ಎಂದು ಸದ್ಯ ವಿರೋಧ ಪಕ್ಷಗಳು ಆರೋಪಿಸುತ್ತಿದೆ.
