ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳ ವಿರುದ್ಧ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜಕೀಯ ಆಯಾಮ ನೀಡಲು ಹವಣಿಸುತ್ತಿದೆ. ಕಳೆದ ಒಂದು ತಿಂಗಳಿಂದ ಸಿಜೆಪಿ ಪ್ರತಿಭಟನೆ ಮತ್ತುಪರೀಕ್ಷಾ ಅಕ್ರಮಗಳ ಕುರಿತು ತುಟಿಬಿಚ್ಚದ ಧರ್ಮೇಂದ್ರ ಪ್ರಧಾನ್, ಇದೀಗ ತುಟಿಬಿಚ್ಚಿದ್ದಾರೆ.ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ವಿದ್ಯಾರ್ಥಿಗಳನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ” ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಧಾನ್, “ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳನ್ನು ರಾಜಕೀಯ ದಾಳಗಳಾಗಿ ಬಳಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿಯವರ ನಿವಾಸದ ಹೊರಗೆ ಧರಣಿ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದೆ. ಭದ್ರತಾ ನಿಯಮಗಳನ್ನು ಉಲ್ಲಂಘಿಸಿದೆ” ಎಂದು ಹೇಳಿದ್ದಾರೆ.
“ಯುವಜನರ ಕಾಳಜಿಯ ವಿಚಾರಗಳು ಮತ್ತು ನೀಟ್ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ. ಆದರೂ,ಕಾಂಗ್ರೆಸ್ ನಾಯಕರು ಪರಿಹಾರ ಕಂಡುಕೊಳ್ಳುವ ಬದಲು ರಾಜಕೀಯ ಪ್ರದರ್ಶನಕ್ಕೆ ಆದ್ಯತೆ ನೀಡಿದ್ದಾರೆ” ಎಂದು ಪ್ರಧಾನ್ ಹೇಳಿದ್ದಾರೆ.
“ಸಂಸತ್ತಿನ ಮುಂಗಾರು ಅಧಿವೇಶನದ ಸಮಯದಲ್ಲಿ ರಾಜಕೀಯ ಗೊಂದಲಗಳನ್ನು ಸೃಷ್ಟಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ” ಎಂದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮವನ್ನು ವಿರೋಧಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ಮಂಗಳವಾತ ಧರಣಿ ಸತ್ಯಾಗ್ರಹ ನಡೆಸಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಗಮನಾರ್ಹವಾಗಿ, ಈ ಪ್ರತಿಭಟನೆಗೂ ಮುನ್ನ ಲೋಕಸಭೆಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಚರ್ಚೆ ನಡೆಸಲು ರಾಹುಲ್ ಗಾಂಧಿ ನೇತೃತ್ವದ ತಂಡವು ಓಂ ಬಿರ್ಲಾ ಅವರಿಗೆ ಮನವಿ ಮಾಡಿತ್ತು. ಆದರೆ, ಓಂ ಬಿರ್ಲ್ಲಾ ಅವರು ಈ ಕುರಿತ ಚರ್ಚೆಗೆ ಸರ್ಕಾರದ ಅನುಮತಿ ಪಡೆಯಬೇಕು ಎಂದು ಹೇಳಿದ್ದರು ಎಂದು ವರದಿಯಾಗಿದೆ.




