ಆಡಳಿತದಲ್ಲಿರುವ ಸರ್ಕಾರಗಳು UAPA ಕಾಯ್ದೆಯನ್ನು ತಮ್ಮ ಟೀಕಾಕಾರರ ವಿರುದ್ಧ ಪ್ರಯೋಗಿಸುತ್ತವೆ. ವ್ಯಕ್ತಿ/ಸಂಘಟನೆಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಬಳಸಲಾಗುತ್ತಿದೆ.
ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಬುಕರ್ ಬಹುಮಾನ ವಿಜೇತೆ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕಾದಂಬರಿಯ ಲೇಖಕಿ ಅರುಂಧತಿ ರಾಯ್ ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಯ ಅಡಿಯಲ್ಲಿ ಪ್ರಕರಣ ದಾಖಲಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ. ಹಾಗಿದ್ದರೆ ಯಾವುದಿದು ಪ್ರಕರಣ ಎಂದು ನೋಡುವುದಾದರೆ, ಇದು ಬರೋಬ್ಬರಿ ಹದಿನಾಲ್ಕು ವರ್ಷಗಳಷ್ಟು ಹಳೆಯ ಪ್ರಕರಣ.
2010ರಲ್ಲಿ ಆಜಾದಿ- ದಿ ಓನ್ಲೀ ವೇ ವೇದಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬುದು ಅರುಂಧತಿ ರಾಯ್ ಮತ್ತು ಕಾಶ್ಮೀರದ ಸೆಂಟ್ರಲ್ ವಿವಿಯ ನಿವೃತ್ತ ಪ್ರಾಧ್ಯಾಪಕ ಶೇಖ್ ಶೌಕತ್ ಹುಸೇನ್ ಅವರ ಮೇಲಿರುವ ಆರೋಪ. ಆಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಅದು ಮುಂದುವರಿದಿರಲಿಲ್ಲ. ಈಗ ಇಬ್ಬರ ವಿರುದ್ಧ ಯುಎಪಿಎ ಕಲಂ 45(1)ರ ಅಡಿಯಲ್ಲಿ ಕ್ರಮ ಜರುಗಿಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಹೊಸದಾಗಿ ಅನುಮತಿ ನೀಡಿದ್ದಾರೆ. ಸದ್ಯದಲ್ಲೇ ದೆಹಲಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ.

ಯುಎಪಿಎ ಕಾಯ್ದೆ ಎಂದರೆ ಏನು?
ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನು 1967ರಲ್ಲಿ ಇಂದಿರಾ ಗಾಂಧಿ ಸರ್ಕಾರ ಭಯೋತ್ಪಾದನೆ ನಿಗ್ರಹ ಮಾಡಲು ಜಾರಿಗೆ ತಂದಿತ್ತು. ನಂತರದಲ್ಲಿ ಈ ಕಾಯ್ದೆ ಅನೇಕ ತಿದ್ದುಪಡಿಗೆ ಒಳಪಟ್ಟಿತ್ತು. 2019ರಲ್ಲಿ ಮೋದಿ ಸರ್ಕಾರವು ಈ ಕಾಯ್ದೆಗೆ ಕೆಲವು ತಿದ್ದುಪಡಿಯನ್ನು ತಂದಿತ್ತು. ತಿದ್ದುಪಡಿಯ ಪ್ರಕಾರ ಈ ಕಾಯ್ದೆ ಭಯೋತ್ಪಾದನೆಯನ್ನು ಮಟ್ಟಹಾಕುವ ಮತ್ತು ಭಾರತದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ಭಾಗಿಯಾಗುವ ವ್ಯಕ್ತಿ ಅಥವಾ ಸಂಘಟನೆಯನ್ನು ಯಾವುದೇ ಔಪಚಾರಿಕ ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸದೆ “ಭಯೋತ್ಪಾದಕರು” ಎಂದು ಗುರುತಿಸಲು ಅವಕಾಶ ಕೊಡುತ್ತದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ವ್ಯಕ್ತಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನ್ಯಾಯಾಲಯ ನಿರ್ಣಯಿಸುವ ತನಕ ಆರೋಪಿಯೆಂದು ಪರಿಗಣಿಸಲಾಗುತ್ತದೆ. ಆದರೆ ಯುಎಪಿಎ ಕಾಯ್ದೆಯಡಿಯಲ್ಲಿ ಬರೇ ಅನುಮಾನದ ಮೇರೆಗೆ ವ್ಯಕ್ತಿಯನ್ನು “ಭಯೋತ್ಪಾದಕ” ಎಂದು ಸಂಬೋಧಿಸಲಾಗುತ್ತದೆ. ಈ ಕಾಯ್ದೆಯಡಿ ದಾಖಲಾಗುವ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗುವುದು ಬಹಳ ವಿರಳ. ಎನ್ ಸಿ ಆರ್ ಬಿ ದತ್ತಾಂಶ ಹೇಳುವ ಪ್ರಕಾರ 2015ರಿಂದ 2020ರ ನಡುವೆ ದಾಖಲಾದ ಯುಎಪಿಎ ಪ್ರಕರಣದಲ್ಲಿ ಅಪರಾಧ ನಿರ್ಣಯ (conviction)ಪ್ರಮಾಣ ಕೇವಲ ಶೇಕಡ 27!
ಆಡಳಿತದಲ್ಲಿ ಇರುವ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ಕಟು ಟೀಕಾಕಾರರ ವಿರುದ್ಧ ಪ್ರಯೋಗಿಸುತ್ತದೆ. ಯಾರು ಸರ್ಕಾರದ ನೀತಿಗಳನ್ನು ವಿರೋಧಿಸುವರೋ ಅವರೇ ಈ ಕಾಯ್ದೆಗೆ ತುತ್ತಾಗುತ್ತಿದ್ದಾರೆ. ಇದನ್ನು ವ್ಯಕ್ತಿ/ಸಂಘಟನೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಬಳಸಲಾಗುತ್ತಿದೆ. ಈ ಕಾಯ್ದೆಯಡಿ ದಾಖಲಾಗುವ ಅನೇಕ ಪ್ರಕರಣದ ಟ್ರಯಲ್‌ಗಳು ಶುರುವಾಗದೆ ಉಳಿದಿರುತ್ತವೆ. ಹಾಗೆ ಟ್ರಯಲ್ ಮುಗಿಸಲು ಏನಿಲ್ಲ ಅಂದ್ರು ಮೂರರಿಂದ ಐದು ವರ್ಷ ಹಿಡಿಯುತ್ತದೆ. ಆರೋಪಿಗಳು ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ನಿರೂಪಿಸುವ ತನಕ ಜಾಮೀನು ಸಿಗುವುದಿಲ್ಲ. ಸಾಮಾನ್ಯ ಅಪರಾಧ ಕಾನೂನಿನಡಿಯಲ್ಲಿ ಪ್ರಕರಣದ ತನಿಖೆ ನಡೆಸಲು ತನಿಖಾ ಸಂಸ್ಥೆಗಳು 60 ರಿಂದ 90 ದಿನ ತೆಗೆದುಕೊಳ್ಳುತ್ತವೆ. ಆದರೆ ಯುಎಪಿಎ ಕಾನೂನಿನಲ್ಲಿ ಇದು 180 ದಿನಗಳವರೆಗೆ ನಡೆಯಲಿದೆ. ಅಂದರೆ ಆರೋಪಿಯು ಜಾಮೀನು ಅರ್ಜಿ ಸಲ್ಲಿಸಲು ಆರು ತಿಂಗಳ ನಂತರ ಅರ್ಹನಾಗುತ್ತಾನೆ.
ಭಯೋತ್ಪಾದಕ ಪದದ ವ್ಯಾಖ್ಯಾನವೇನು?
“People’s Union of Civil Liberties” ತಯಾರಿಸಿದ “UAPA: Criminalising Dissent and State Terror” ಕರಡು ವರದಿಯಲ್ಲಿ ಕಂಡು ಬಂದ ಹಾಗೆ 2018 ರಿಂದ 2020ರವರೆಗೆ ಬಂಧಿಸಿದ 4,690 ವ್ಯಕ್ತಿಗಳಲ್ಲಿ 1080 ಮಂದಿಗೆ ಮಾತ್ರ ಜಾಮೀನು ಸಿಕ್ಕಿದೆ. “UAPA ಅಡಿಯಲ್ಲಿ ಭಯೋತ್ಪಾದಕ ಕೃತ್ಯದ ಸಡಿಲವಾದ ವ್ಯಾಖ್ಯಾನವು ಕಠಿಣ ಮತ್ತು ಪ್ರಜಾಸತ್ತಾತ್ಮಕವಲ್ಲದ ನಿಬಂಧನೆಯನ್ನು ಮಾಡಿದೆ” ಎಂದು ವರದಿಯು ಗಮನಿಸಿದೆ. ಈ ಕಾನೂನಿನ ಅಡಿಯಲ್ಲಿ “ಕಾನೂನು ಮತ್ತು ಸುವ್ಯವಸ್ಥೆಗೆ, ಸಾಮಾಜಿಕ ಸುವ್ಯವಸ್ಥೆಗೆ ಅಥವ ದೇಶದ ಏಕತೆ, ಅಖಂಡತೆ ಮತ್ತು ರಕ್ಷಣೆಗೆ ಧಕ್ಕೆ ತರುವ ಅಥವ ಜನಸಮೂಹದ ಮನಸ್ಸಿನಲ್ಲಿ ಭಯ ಹರಡಿಸುವ ಕೃತ್ಯಗಳನ್ನ ಭಯೋತ್ಪಾದಕ ಕೃತ್ಯ ಎಂದು ವ್ಯಾಖ್ಯಾನಿಸಲಾಗಿದೆ.
ಆದರೆ, ವಾಸ್ತವದಲ್ಲಿ ಈ ಕಾನೂನು ಪೊಲೀಸರಿಗೆ ವ್ಯಾಪಕ ಅಧಿಕಾರ ಕೊಟ್ಟು, ಯಾರು ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುತ್ತಾರೊ ಅಥವಾ ಸರ್ಕಾರದ ನೀತಿಗಳನ್ನ ಪ್ರಶ್ನಿಸುವರೊ ಅವರನ್ನ ಅಪರಾಧಿಗಳನ್ನಾಗಿಸಲು ಬಳಸಲಾಗುತ್ತಿದೆ ಎಂದು ವರದಿಯು ಗಮನಿಸಿದೆ.

ಸ್ಟ್ಯಾನ್ ಸ್ವಾಮಿ ಎಂಬ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಜಾರ್ಖಂಡ್ ಆದಿವಾಸಿಗಳ ನಡುವೆ ತಮ್ಮ ಜೀವನ ಕಳೆದವರು. ಆದಿವಾಸಿಗಳ ಸಂಪನ್ಮೂಲ ಮತ್ತು ಜಮೀನಿನ ಹಕ್ಕಿಗಾಗಿ ಧ್ವನಿಯಾಗಿದ್ದವರು. ಅವರನ್ನು ಕೂಡ 2018 ನಡೆದ ಭೀಮಾ-ಕೋರೆಗಾಂವ್ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಇದೇ ಯುಎಪಿಎ ಕಾಯ್ದೆ ಅಡಿ ಬಂಧಿಸಲಾಯಿತು. ಅವರಿಗೆ ಆಗ 84 ವಯಸ್ಸು. ಆದಿವಾಸಿಗಳ ಹಕ್ಕುಗಳಿಗೆ ಜೀವ ತೇಯ್ದ ವ್ಯಕ್ತಿಯನ್ನು ಮಾವೋವಾದಿ ಜೊತೆ ನಂಟಿದೆ ಮತ್ತು ಹಿಂಸೆಯನ್ನು ಪ್ರಚೋದಿಸಿದರು ಎಂಬ ಆರೋಪವೊಡ್ಡಿ ಎನ್‌ಐಎ ಬಂಧಿಸಿತು. ಪಾರ್ಕಿನ್ಸನ್ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಸಾಯುವ ಕಡೆಗಾಲದವರೆಗೂ ಜಾಮೀನು ಸಿಗಲಿಲ್ಲ. ಧ್ವನಿ ಇಲ್ಲದವರ ಪರ ಧ್ವನಿ ಎತ್ತುವ ನಿಸ್ವಾರ್ಥ ಹೋರಾಟಗಾರರನ್ನು ಸರ್ಕಾರ ಈ ಕಠೋರ ಕಾನೂನನ್ನು ಬಳಸಿ ವ್ಯವಸ್ಥಿತವಾಗಿ ಕೊಲ್ಲುತ್ತಿದೆ.
ಮಹರ್ ಸೈನಿಕರಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವು ಪೇಶ್ವೆ ಮರಾಠರನ್ನ 1818ರಲ್ಲಿ ಯುದ್ಧದಲ್ಲಿ ಸೋಲಿಸಿದ ಸ್ಮರಣಾರ್ಥವಾಗಿ 200ವರ್ಷದ ವಿಜಯೋತ್ಸವವನ್ನು ಜನವರಿ 1, 2018ರಲ್ಲಿ ಅನೇಕ ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಕವಿಗಳು, ವಕೀಲರು, ಪ್ರಾಧ್ಯಾಪಕರು, ದಲಿತಪರ ಹೋರಾಟಗಾರರು ಸಂಭ್ರಮಿಸಲು ಭಾಗವಹಿಸಿದ್ದರು. ಇದರ ಹಿಂದಿನ ದಿನ ಹೋರಾಟಗಾರರು ಎಲ್ಗಾರ್ ಪರಿಷತ್ ಕಾರ್ಯಕ್ರಮದಲ್ಲಿ ಸರ್ಕಾರದ ನೀತಿಗಳನ್ನ ಟೀಕಿಸಿದ್ದರು ಹಾಗೂ ಜಾತಿ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದ್ದರು. ಮಾರನೆಯ ದಿನ, ಕೆಲವು ಕಿಡಿಗೇಡಿಗಳಿಂದ ಭೀಮ ಕೋರೆಗಾಂವ್‌ನಲ್ಲಿ ಹಿಂಸಾಚಾರ ನಡೆಯಿತು. ಇದರಿಂದ ಪೊಲೀಸರು, ಹೋರಾಟಗಾರರು ಹಿಂಸೆಗೆ ಪ್ರಚೋದಿಸಿದರು ಮತ್ತು ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಇಟ್ಟುಕೊಂಡಿದ್ದಾರೆ ಮತ್ತು ಪ್ರಧಾನಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆಂದು ಹೇಳಿ ಇದೇ ಯುಎಪಿಎ ಅಡಿ ಬಂಧಿಸಲಾಯಿತು.
2018ರವರೆಗೆ ಪುಣೆಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆಗ 9 ಜನರನ್ನ ಬಂಧಿಸಿದ್ದರು. 2020ರಲ್ಲಿ ಎನ್ ಐಎ ಈ ಪ್ರಕರಣವನ್ನ ಕೈಗೆತ್ತಿಕೊಂಡಿತು, ಆಗ ಎಂಟು ಮಂದಿಯನ್ನು ಬಂಧಿಸಿತು. ಸುಧೀರ್ ಧನ್ವಾಲೆ, ಸುರೇಂದ್ರ ಗಡ್ಲಿಂಗ್, ಸಾಗರ್ ಗೋರ್ಖೆ, ರಮೇಶ್ ಗರ್ಚೋರ್, ಜ್ಯೋತಿ ಜಗ್ತಪ್, ರೋನಾ ವಿಲ್ಸನ್, ಹನಿಬಾಬು, ಹೋರಾಟಗಾರರನ್ನು ಬಂಧಿಸಿ ಮೂರ್ನಾಲ್ಕು ವರ್ಷಗಳೇ ಕಳೆದರೂ ಬಂಧನದಲ್ಲಿ ಇರಿಸಲಾಗಿದೆ. ಮಹೇಶ್ ಭಟ್ ಗೆ ಕಳೆದ ವರ್ಷ ಬಾಂಬೆ ಹೈಕೋರ್ಟ್ ಜಾಮೀನು ನೀಡಿದರೂ ಅವರನ್ನು ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ.

ವರವರ ರಾವ್ ಮತ್ತು ಸುಧಾ ಭಾರದ್ವಾಜ್ ಅವರಿಗೆ 2021ರಲ್ಲಿ ಜಾಮೀನು ದೊರಕಿದೆ. ಆನಂದ್ ತೇಲ್ತುಂಬ್ಡೆ ಅವರಿಗೆ 2022ರಲ್ಲಿ, ಅರುಣ್ ಫೆರೇರಾ ಮತ್ತು ವರ್ನನ್ ಗೋನ್ಸಾಲ್ವಸ್ ಅವರಿಗೆ 2023 ಜುಲೈನಲ್ಲಿ ಜಾಮೀನು ಸಿಕ್ಕಿದೆ. ಶೋಮಾ ಸೇನ್ ಅವರಿಗೆ ಈ ವರ್ಷದ ಏಪ್ರಿಲ್‌ನಲ್ಲಿ ಮತ್ತು ಗೌತಮ್ ನವ್ಲಖಾ ಅವರಿಗೆ ಮೇ 14ರಂದು ಹೈಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಏನೆಂದರೆ ಬಂಧನಕ್ಕೆ ಒಳಪಟ್ಟ ಅಷ್ಟು ಜನರ ಪೈಕಿ ಒಬ್ಬರ ಮೇಲೂ ಇದುವರೆಗೆ ಅಪರಾಧ ನಿರ್ಣಯವಾಗಿಲ್ಲ.
ನ್ಯೂಸ್ ಕ್ಲಿಕ್ ಸಂಪಾದಕರಾದ ಪ್ರಬೀರ್ ಪುರಕಾಯಸ್ಥ ಮತ್ತು ಹೆಚ್ ಆರ್ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನ ದೆಹಲಿ ಪೊಲೀಸರು ವಿಶೇಷ ದಳದವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾ ಮೂಲಗಳಿಂದ ಹಣ ಪಡೆದು ಭಾರತ ಸರ್ಕಾರದ ನೀತಿಗಳನ್ನ ವಿರೋಧಿಸುವ “ಹಣಕ್ಕಾಗಿ ಸುದ್ದಿ” (ಪೇಯ್ಡ್ ನ್ಯೂಸ್) ಪ್ರಸಾರ ಮಾಡುವ ಸಂಚು ಮಾಡಿದೆ ಎಂಬ ಆರೋಪದ ಮೇರೆಗೆ ಇದೆ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಕಚೇರಿಯ ಮೇಲೆ ದಾಳಿ ಮಾಡಿ, ಅನೇಕ ಪತ್ರಕರ್ತರನ್ನ ಬಂಧಿಸಲಾಯಿತು. ಪೊಲೀಸರು ಪುರಕಾಯಸ್ಥರನ್ನ ಬಂಧಿಸುವ ವೇಳೆ ಕಾರಣಗಳನ್ನ ತಿಳಿಸಿರಲಿಲ್ಲ. ವಶಕ್ಕೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನು ಅವರಿಗಾಗಲಿ ಅಥವ ವಕೀಲರಿಗೆ ಆಗಲಿ ಪೊಲೀಸರು ನೀಡಿರಲಿಲ್ಲ.

ಸಂವಿಧಾನದ ವಿಧಿ 22(1)ರ ಪ್ರಕಾರ ಯಾವುದೇ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಯಲ್ಲಿ ಇರಿಸಿಕೊಳ್ಳುವ ಮೊದಲು ಆ ವ್ಯಕ್ತಿಗೆ ಬಂಧನದ ಕಾರಣಗಳನ್ನ ತಿಳಿಸುವುದು ಕಡ್ಡಾಯ. ಮೌಖಿಕವಾಗಿ ಕಾರಣ ನೀಡಿದರೆ ಸಾಕಾಗುವುದಿಲ್ಲ. ಲಿಖಿತವಾಗಿಯೇ ನೀಡಬೇಕು. ಆದ್ದರಿಂದ ಇದೆ ವರ್ಷದ ಮೇನಲ್ಲಿ ಉಚ್ಚ ನ್ಯಾಯಾಲಯವು ಪುರಕಾಯಸ್ಥರ ಬಂಧನ ಮತ್ತು ನಂತರ ವಶಕ್ಕೆ ಪಡೆದಿರುವುದು ಅಸಿಂಧು ಮಾಡಿ ಆದೇಶ ಹೊರಡಿಸಿತು. ಇದು ಕೂಡ ಸ್ವತಂತ್ರ ಪತ್ರಿಕೋದ್ಯಮ ಮಾಡುವ ಪತ್ರಕರ್ತರ ಮೇಲೆ ಸರ್ಕಾರ ಗುರಿ ಮಾಡಿ ಜೈಲಿಗೆ ಹಾಕುವ ಚಾಳಿಗೆ ಸೂಕ್ತ ಉದಾಹರಣೆ.
ಈಗ ಹದಿನಾಲ್ಕು ವರ್ಷಗಳ ಹಿಂದೆ ಮಾಡಿದ ಪ್ರಚೋದನಕಾರಿ ಭಾಷಣದ ಮೇಲೆ ಯುಎಪಿಎ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಆದೇಶಿಸಿರುವುದು ದ್ವೇಷ ರಾಜಕಾರಣಕ್ಕೆ ನಿದರ್ಶನ ಮತ್ತು ಭಿನ್ನ ಅಭಿಪ್ರಾಯ ಹೊಂದಿರುವವರನ್ನು “ಭಯೋತ್ಪಾದಕರು” ಅಂತ ವರ್ಷವಿಡಿ ಜೈಲಿನಲ್ಲಿ ಇರಿಸಿ, ಪ್ರಜಾಪ್ರಭುತ್ವದ ತತ್ವಗಳಿಗೆ ಕೊಡಲಿ ಏಟು ಕೊಡುತ್ತಿರುವುದು ಇವತ್ತಿನ ನಮ್ಮ ದೇಶದ ದುರಂತ. ಭಯೋತ್ಪಾದನೆಯನ್ನು ಮಟ್ಟಹಾಕುವುದು ಸರಿ. ಆದರೆ, ದೇಶದ ಜನರು ಸರ್ಕಾರ ನೀತಿ, ಧೋರಣೆಯನ್ನು ವಿರೋಧಿಸಿದ ಮಾತ್ರಕ್ಕೆ ಭಯೋತ್ಪಾದಕರು ಅಂತ ಶಿಕ್ಷಿಸೋದು ಎಷ್ಟು ಸಮರ್ಥನೀಯ?
ಸಂವಿಧಾನವನ್ನ ಬದಲಾಯಿಸುತ್ತೇವೆ ಅನ್ನೋದು ದೇಶದ್ರೋಹ ಅಲ್ಲವೇ? ಅದರಿಂದ ದೇಶದ ಸಮಗ್ರತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆಯಾಗುವುದಿಲ್ಲವೇ? ಮತ್ತೆ ಸಂವಿಧಾನದ ಬದಲಾವಣೆ ಮಾಡುತ್ತೇವೆಂದು ನಡು ಬೀದಿಯಲ್ಲಿ ಹೇಳಿಕೆ ಕೊಡುವವರ ಮೇಲೇಕೆ ಕ್ರಮವಿಲ್ಲ?
2024ರ ಲೋಕಸಭಾ ಚುನಾವಣೆ ನಡೆಯುತ್ತಿರುವಾಗ, ಮೋದಿಯವರು ದ್ವೇಷ ಭಾಷಣ ಮಾಡುವಾಗ ಮೌನವಾಗಿದ್ದ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಿಜೆಪಿಯ ಸೋಲನ್ನು ವಿಮರ್ಶಿಸಿದರು. “ವಿರೋಧ ಪಕ್ಷಗಳನ್ನ ವೈರಿಗಳಂತೆ, ಚುನಾವಣೆಗಳನ್ನ ಯುದ್ಧಗಳಂತೆ ಪರಿಗಣಿಸಬಾರದು” ಎಂದು ಬಿಜೆಪಿಗೆ ಕಿವಿ ಹಿಂಡುವ ಕೆಲಸ ಮಾಡಿದರು.
ನಿಜವಾಗಲೂ ಮೋಹನ್ ಭಾಗವತ್ ಅವರಿಗೆ ಭಿನ್ನಾಭಿಪ್ರಾಯಿಗಳ ಮೇಲೆ ಗೌರವ ಇದ್ದಲ್ಲಿ ಮತ್ತು ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇದ್ದಲ್ಲಿ ಯುಎಪಿಎ ಕಾನೂನಿನ ಅಡಿಯಲ್ಲಿ ಅನೇಕ ಬುದ್ಧಿಜೀವಿಗಳನ್ನ ಮತ್ತು ಸರ್ಕಾರದ ಟೀಕಾಕಾರರನ್ನು ಭಯೋತ್ಪಾದಕರು ಎಂದು ಬಂಧಿಸಿ, ವಿಚಾರಣೆ ನಡೆಸದೇ ವರ್ಷಗಳ ಕಾಲ ಜಾಮೀನು ನಿರಾಕರಿಸಿ ಸೆರೆಮನೆಯಲ್ಲಿಟ್ಟು ಮಾನಸಿಕ ಮತ್ತು ದೈಹಿಕವಾಗಿ ಹೋರಾಟಗಾರರನ್ನ ಕುಗ್ಗಿಸುವ ಕುತಂತ್ರದ ಬಗ್ಗೆ ಧ್ವನಿ ಎತ್ತಲಿ.
ಆಡಳಿತದ ಚಿಕ್ಕಾಣಿ ಹಿಡಿಯುವ ಪಕ್ಷಗಳ ನೀತಿ ಧೋರಣೆಯನ್ನ ಟೀಕಿಸುವುದು ಎಂದಿಗೂ ದೇಶದ್ರೋಹವಾಗುವುದಿಲ್ಲ. “ಜನರೇ ದೇಶ” ಎಂದ ಮೇಲೆ ಅಸಹಾಯಕ ಜನರ ಧ್ವನಿಯಾಗಿ ನಿಲ್ಲುವುದು ಭಯೋತ್ಪಾದನೆ ಹೇಗಾಗುತ್ತದೆ?
ಇವತ್ತು ನೀಟ್, ಯುಜಿ, ಪಿಜಿ ಮತ್ತು ನೆಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದ ಫಲವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಗೊಂದಲಮಯವಾಗಿದೆ. ದೇಶದ ಭವಿಷ್ಯವಾಗಿರುವ ಈ ವಿದ್ಯಾರ್ಥಿಗಳು ತಮಗಾಗುತ್ತಿರುವ ಅನ್ಯಾಯದ ಕುರಿತು ಮಾತಾಡಿದರೆ, ಪ್ರತಿಭಟಿಸಿದರೆ ಅವರನ್ನು ಈ ಯುಎಪಿಎ ಕಾಯ್ದೆಯ ಅಡಿ ಬಂಧಿಸಲು ಪ್ರಭುತ್ವ ಹಿಂದು ಮುಂದು ನೋಡುವುದಿಲ್ಲ ಅನ್ನಿಸುತ್ತದೆ.

ಚರಣ್ ಗೌಡ ಬಿ ಕೆ
ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು