ಸಿಬಿಎಸ್ಇ ಪಠ್ಯಕ್ರಮದಲ್ಲಿ 9ನೇ ತರಗತಿಯಿಂದ ತ್ರಿಭಾಷಾ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಪ್ರೌಢಶಾಲಾ ಹಂತದಲ್ಲಿ ಹೊಸ ಭಾಷೆಯನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಶೈಕ್ಷಣಿಕ ಒತ್ತಡ ಹೆಚ್ಚಾಗಲಿದೆ ಎಂದಿರುವ ನ್ಯಾಯಾಲಯವು, “ಯಾವುದೇ ಹೊಸ ಭಾಷೆಯನ್ನು ಕಡ್ಡಾಯಗೊಳಿಸಬೇಕಿದ್ದರೆ, ಅದನ್ನು 5 ಅಥವಾ 6ನೇ ತರಗತಿಯಲ್ಲೇ ಪರಿಚಯಿಸುವುದು ಸೂಕ್ತ. ಆದರೆ, ಯಾವುದೇ ಕಾರಣಕ್ಕೂ 9ನೇ ತರಗತಿಯಲ್ಲಿ ಹೊಸ ಭಾಷೆಯನ್ನು ಪರಿಚಯಿಸಕೂಡದು” ಎಂದು ಹೇಳಿದೆ.
ತಮಿಳುನಾಡು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಜವಾಹರ್ ನವೋದಯ ವಿದ್ಯಾಲಯಗಳನ್ನು (JNV) ಸ್ಥಾಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಆರ್ ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿದೆ. ಪೀಠವು ನೇರವಾಗಿ ಸಿಬಿಎಸ್ಇ ಭಾಷಾ ನೀತಿಯನ್ನು ಸವಾಲು ಮಾಡಿದ ಅರ್ಜಿಯ ವಿಚಾರಣೆ ನಡೆಸದಿದ್ದರೂ, ಶಾಲಾ ಹಂತದಲ್ಲಿ ಮೂರನೇ ಭಾಷೆಯನ್ನು ಯಾವ ಹಂತದಲ್ಲಿ ಪರಿಚಯಿಸಬೇಕು ಎಂಬ ಬಗ್ಗೆ ಅತ್ಯಂತ ಮಹತ್ವದ ಮಾರ್ಗದರ್ಶನ ನೀಡಿದೆ. ನ್ಯಾಯಾಲಯದ ಈ ನಿಲುವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.
ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಕೇಂದ್ರ ಸರ್ಕಾರವು 9ನೇ ತರಗತಿಯಿಂದ ಮೂರನೇ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಈಗಾಗಲೇ 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಲ್ಲಿ ಓದಿನ ಒತ್ತಡ ಆರಂಭವಾಗಿರುತ್ತದೆ. 9ನೇ ತರಗತಿಯಂತೂ ಸಂಪೂರ್ಣ ಒತ್ತಡದಿಂದ ಕೂಡಿರುತ್ತದೆ. ಇಂತಹ ಹಂತದಲ್ಲಿ ಮತ್ತೊಂದು ಹೊಸ ಭಾಷೆಯನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುವುದು ಸರಿಯಲ್ಲ. ಹೊಸ ಭಾಷೆಯ ಕಲಿಕೆ ಅಗತ್ಯವೆನಿಸಿದರೆ ಅದನ್ನು ಪ್ರಾಥಮಿಕ ಹಂತದಲ್ಲೇ ಅಂದರೆ 5 ಅಥವಾ 6ನೇ ತರಗತಿಯಲ್ಲೇ ಜಾರಿಗೆ ತರಬೇಕು,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.



