ಕುಡಿದ ಅಮಲಿನಲ್ಲಿ ಲಾರಿ ಚಾಲಕನೊಬ್ಬ ಪಾದಚಾರಿಗಳು ಮತ್ತು ವಾಹನಗಳ ಮೇಲೆ ಟ್ರಕ್ ನುಗ್ಗಿಸಿದ್ದು, ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಹಲವರಿಗೆ ತೀವ್ರ ಗಾಯಗಳಾಗಿವೆ.
ಮಧ್ಯ ಪ್ರದೇಶದ ಇಂದೋರ್‌ನ ಕಲಾನಿ ನಗರದಲ್ಲಿಸೋಮವಾರ ಸಂಜೆ ಈ ಭಯಾನಕ ಘಟನೆ ನಡೆದಿದ್ದು, ರಸ್ತೆ ತುಂಬೆಲ್ಲ ದೇಹಗಳು ಬಿದ್ದಿವೆ. ನೋವಿನಿಂದ ನರಳಾಡುತ್ತಿರುವವ ದೃಶ್ಯ ಹೃದಯವಿದ್ರಾವಕವಾಗಿತ್ತು.
“ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಕುಡಿದ ಮತ್ತಿನಲ್ಲಿದ್ದ ಟ್ರಕ್ ಚಾಲಕ ಮೊದಲಿಗೆ ರಾಮಚಂದ್ರ ನಗರ ಸಮೀಪ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಡಾ ಗಣಪತಿ ಪ್ರದೇಶದ ಕಡೆಗೆ ಟ್ರಕ್ ಅನ್ನು ನುಗ್ಗಿಸಿದ್ದಾನೆ” ಎಂದು ಉಪ ಪೊಲೀಸ್ ಆಯುಕ್ತ ಕೃಷ್ಣ ಲಾಲ್ ಚಂದಾನಿ” ಘಟನೆಯ ಬಗ್ಗೆ ವಿವರಿಸಿದ್ದಾರೆ.
ಅಪಘಾತದ ಬೆನ್ನಲ್ಲೇ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೋಪಗೊಂಡ ಸ್ಥಳೀಯರು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಈ ವರದಿಗಳನ್ನು ನಿರಾಕರಿಸಿರುವ ಸ್ಥಳೀಯರು, ಟ್ರಕ್ ಕೆಳಗೆ ಸಿಲುಕಿಗೊಂಡಿದ್ದ ಬೈಕ್‌ನ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ. ಏತನ್ಮಧ್ಯೆ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.