ರಾತ್ರಿ ವೇಳೆ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಆಕೆಯ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ ಮಾತ್ರಕ್ಕೆ ಅದನ್ನು ‘ಅತ್ಯಾಚಾರದ ಯತ್ನ’ ಎಂದು ಕರೆಯಲಾಗುವುದಿಲ್ಲ ಎಂದು ಝಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರವೆಸಗುವ ಸ್ಪಷ್ಟ ಉದ್ದೇಶದ ಕೃತ್ಯವಿಲ್ಲದೆ ಈ ಘಟನೆಯನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಮತ್ತು 511ರ ಅಡಿ ಅತ್ಯಾಚಾರ ಯತ್ನ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
1999ರ ಹಳೆಯ ಪ್ರಕರಣವೊಂದರ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರಿದ್ದ ಪೀಠ, ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮಾರ್ಪಡಿಸಿದೆ. ಆರೋಪಿಗೆ ಐಪಿಸಿ ಸೆಕ್ಷನ್ 376/511ರ ಅಡಿ ವಿಧಿಸಲಾಗಿದ್ದ ನಾಲ್ಕು ವರ್ಷಗಳ ಕಠಿಣ ಶಿಕ್ಷೆಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಈ ಕೃತ್ಯವನ್ನು ‘ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಮಾನಭಂಗದ ಯತ್ನ’ (ಐಪಿಸಿ ಸೆಕ್ಷನ್ 354) ಎಂದು ಪರಿಗಣಿಸಿದೆ.
”ಸಂತ್ರಸ್ತೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಮಗ್ರವಾಗಿ ಗಮನಿಸಿದಾಗ, ಆರೋಪಿಯು ಅತ್ಯಾಚಾರ ಎಸಗುವ ಸ್ಪಷ್ಟ ಉದ್ದೇಶದಿಂದಲೇ ಕೃತ್ಯವೆಸಗಿದ್ದಾನೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಆತನ ವರ್ತನೆಯನ್ನು ಗಮನಿಸಿದರೆ ಅದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಅಸಭ್ಯ ಕೃತ್ಯವೆಂದು ಸಾಬೀತಾಗುತ್ತದೆ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಅಲ್ಲದೆ, ಘಟನೆ ನಡೆದು 26 ವರ್ಷಗಳು ಕಳೆದಿವೆ ಮತ್ತು ಆರೋಪಿಯ ಯಾವುದೇ ಹಳೆಯ ಅಪರಾಧ ಹಿನ್ನೆಲೆ ಇಲ್ಲದಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಹೀಗಾಗಿ, ನ್ಯಾಯದ ಹಿತದೃಷ್ಟಿಯಿಂದ ಆತ ವಿಚಾರಣೆ ವೇಳೆ ಜೈಲಿನಲ್ಲಿ ಕಳೆದಿದ್ದ ಸುಮಾರು 8 ತಿಂಗಳ ಅವಧಿಯನ್ನೇ ಶಿಕ್ಷೆ ಎಂದು ಪರಿಗಣಿಸಿ, ಪ್ರಕರಣವನ್ನು ಇತ್ಯರ್ಥಗೊಳಿಸಿದೆ.
1999ರ ಡಿಸೆಂಬರ್ 27ರಂದು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ, ಮಧ್ಯರಾತ್ರಿ ಆರೋಪಿಯು ಅಕ್ರಮವಾಗಿ ಮನೆಗೆ ನುಗ್ಗಿದ್ದ. ಆಕೆಯ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ್ದ. ಮಹಿಳೆ ಕೂಗಿಕೊಂಡಾಗ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಓಡಿಬಂದಿದ್ದರು. ಈ ವೇಳೆ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಡಿಸೆಂಬರ್ 31ರಂದು ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಘಾಟ್‌ಶಿಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, 2006ರ ಜುಲೈ 28ರಂದು ಆರೋಪಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ, ಅತ್ಯಾಚಾರ ಯತ್ನವನ್ನು ಸಾಬೀತುಪಡಿಸಲು ಅಗತ್ಯವಿರುವ ಅಂಶಗಳು ಸಂತ್ರಸ್ತೆಯ ಹೇಳಿಕೆಯಲ್ಲಿಲ್ಲ ಎಂದು ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ವಾದ ಮಂಡಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿದೆ.





