ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ ಸಾಯುತ್ತಾರೆ, ನಾಟಕವಾಡಬೇಡ” ಎಂದು ಮೇಲಧಿಕಾರಿಯೊಬ್ಬರು ಉಡಾಫೆಯ ಉತ್ತರ ನೀಡಿದ ಘಟನೆ ನಡೆದಿದೆ.
ಚೆನ್ನೈನ ಯುಕೋ ಬ್ಯಾಂಕ್‌ನ ವಲಯ ಮುಖ್ಯಸ್ಥ ಆರ್‌ಎಸ್ ಆಜಿತ್ ವಿರುದ್ಧ ಇಮೇಲ್‌ನಲ್ಲಿ ನಡೆಸಲಾಗಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಇಮೇಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ “ಸರ್ವಾಧಿಕಾರಿ, ಅಪಮಾನಕರ ವರ್ತನೆಯನ್ನು ಖಂಡಿಸಲಾಗಿದೆ.
ಈ ಆರೋಪಗಳನ್ನು ಒಬ್ಬ ನೆಟಿಜನ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು “ಭಾವನಾತ್ಮಕ ಕಿರುಕುಳ ಮತ್ತು ಸಾಂಸ್ಥಿಕ ಕ್ರೌರ್ಯ” ಎಂದು ಬಣ್ಣಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಆರ್ಥಿಕ ಸೇವೆಗಳ ಇಲಾಖೆ ಮತ್ತು ಹಣಕಾಸು ಸಚಿವಾಲಯವನ್ನು ಟ್ಯಾಗ್ ಮಾಡಿ, “ಇಂತಹ ಕ್ರೂರ ಅಧಿಕಾರದ ವಿರುದ್ಧ ಯಾಕೆ ಯಾವುದೇ ಕ್ರಮವಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಈ ಆರೋಪಗಳ ಬಗ್ಗೆ ಯುಕೋ ಬ್ಯಾಂಕ್ ಅಥವಾ ಅದರ ಚೆನ್ನೈ ವಲಯ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು
ಒಬ್ಬ ಅಧಿಕಾರಿ ತಾಯಿಯ ಮರಣದ ನಂತರ ರಜೆ ಕೇಳಿದಾಗ ಅದನ್ನು ನಿರಾಕರಿಸಲಾಗಿದೆ. ಮತ್ತೊಬ್ಬರು ತಮ್ಮ ಒಂದು ವರ್ಷದ ಮಗಳು ಐಸಿಯುನಲ್ಲಿ ಜೀವ–ಮರಣ ಹೋರಾಟ ನಡೆಸುತ್ತಿದ್ದರೂ ಕಚೇರಿಗೆ ಬರಬೇಕೆಂದು ಒತ್ತಾಯಿಸಿ, ಬಾರದಿದ್ದರೆ “ವೇತನವಿಲ್ಲದ ರಜೆ ” ಎಂದು ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಕೆಲಸದ ಸ್ಥಳದಲ್ಲಿ ಕಿರುಕುಳದ ಪ್ರಕರಣಗಳು ವಿಶ್ವಾದ್ಯಂತ ಸಾಮಾನ್ಯವಾಗಿದೆ. ಇತ್ತೀಚೆಗೆ ಥಾಯ್‌ಲೆಂಡ್‌ನ ಕಾರ್ಖಾನೆಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬರು ಅನಾರೋಗ್ಯದಿಂದಾಗಿ ರಜೆ ಕೋರಿದರೂ ನಿರಾಕರಿಸಿದ ಕಾರಣ ಕೆಲಸದ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ ಘಟನೆಯೂ ವರದಿಯಾಗಿದೆ.
ಈ ಆರೋಪಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಉದ್ಯೋಗಿಗಳ ಕಷ್ಟಕರ ಪರಿಸ್ಥಿತಿಯನ್ನು ಬೆಳಕಿಗೆ ತಂದಿದ್ದು, ನೆಟ್ಟಿಗರು ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.