ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಸೇನೆಯ ಜೊತೆಗಿನ ಮುಖಾಮುಖಿ ಹಾಗೂ ಸಂಘರ್ಷವು ಹಲವು ಸ್ಥಳಗಳಲ್ಲಿ ಈಗಲೂ ಮುಂದುವರಿದಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯ ಮಹಾನಿರ್ದೇಶಕ ಶತ್ರುಜಿತ್ ಕಪೂರ್ ಸ್ಪಷ್ಟಪಡಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಗಡಿ ಉದ್ವಿಗ್ನತೆಯ ಕುರಿತಂತೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ.
ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಐಟಿಬಿಪಿ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕಪೂರ್, ಹೊಸದಾಗಿ ರಚನೆಯಾದ ‘ಶೌರ್ಯ’ ಕಮಾಂಡೋಗಳು ಈ ಮುಖಾಮುಖಿಗಳಲ್ಲಿ ಅತ್ಯುತ್ತಮ ಕಾರ್ಯಾಚರಣೆ ನಡೆಸಿದ್ದಾರೆ ಎಂದರು. ಐಟಿಬಿಪಿಯನ್ನು ಆರಂಭದಲ್ಲಿ ಪರ್ವತ ಗೆರಿಲ್ಲಾ ಪಡೆಯಾಗಿ ರಚಿಸಲಾಗಿತ್ತು ಮತ್ತು 2004ರಲ್ಲಿ ಚೀನಾ ಗಡಿ ಕಾವಲು ಜವಾಬ್ದಾರಿ ನೀಡಲಾಗಿತ್ತು. ಇದೀಗ ಎತ್ತರದ ಪ್ರದೇಶದ ಯುದ್ಧಗಳಲ್ಲಿ ವಿಶೇಷ ತರಬೇತಿ ಪಡೆದ ಶೌರ್ಯ ಕಮಾಂಡೋಗಳ ಸಂಪೂರ್ಣ ಬೆಟಾಲಿಯನ್ ಸಿದ್ಧವಾಗುತ್ತಿದೆ ಎಂದು ವಿವರಿಸಿದರು.
ಜುಲೈನಿಂದಲೇ ಅರುಣಾಚಲ ಪ್ರದೇಶದ ಟಾಕ್ಸಿಂಗ್ ಬಳಿಯ ಅಸಾಫಿಲಾ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಬಿಕ್ಕಟ್ಟು ನಿರ್ಮಾಣವಾಗಿದೆ. ವಾಸ್ತವಿಕ ಗಡಿ ರೇಖೆಯ (LAC) ಒಳಗೆ 6 ರಿಂದ 7 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ ಸೇನೆ (PLA) ತನ್ನ ಟೆಂಟ್‌ಗಳನ್ನು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿಯಲ್ಲಿ ತನ್ನ ಸೇನಾ ನಿಯೋಜನೆಯನ್ನು ಹೆಚ್ಚಿಸಿದೆ ಹಾಗೂ ರಕ್ಷಣಾ ಸಿದ್ಧತೆಗಳನ್ನು ಬಿಗಿಗೊಳಿಸಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇತ್ತೀಚೆಗೆ ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರೂ ಗಡಿಯಲ್ಲಿನ ಪರಿಸ್ಥಿತಿ ತಣ್ಣಗಾಗಿಲ್ಲ. ಜುಲೈನಿಂದ ಈವರೆಗೆ ಉಭಯ ದೇಶಗಳ ನಡುವೆ ಮೂರು ಉನ್ನತ ಮಟ್ಟದ ಗಡಿ ಮಾತುಕತೆಗಳು ನಡೆದಿವೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಸಭೆಗಳಲ್ಲಿ ಗಡಿ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ಚಟುವಟಿಕೆಗಳು ಮುಂದುವರಿದಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.
ಐಟಿಬಿಪಿ ಬಳಸುತ್ತಿರುವ ಶಸ್ತ್ರಾಸ್ತ್ರಗಳು 50 ವರ್ಷ ಹಳೆಯದಾಗಿದ್ದು, ಆಧುನೀಕರಣದ ತುರ್ತು ಅಗತ್ಯವಿದೆ ಎಂದು ಕಪೂರ್ ಒತ್ತಿ ಹೇಳಿದರು. ಚೀನಾ ತನ್ನ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸಿಕೊಂಡಿರುವುದರಿಂದ ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರ ಅದನ್ನು ಎದುರಿಸುವುದು ಕಷ್ಟ. ಹೀಗಾಗಿ ಡ್ರೋನ್ ಮತ್ತು ಆ್ಯಂಟಿ-ಡ್ರೋನ್ ತಂತ್ರಜ್ಞಾನದಲ್ಲಿ ಭಾರತ ಹೆಚ್ಚಿನ ಹೂಡಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಆಧುನೀಕರಣ ನಿಧಿಯಲ್ಲಿ ಶೇ.70ರಷ್ಟನ್ನು ಡ್ರೋನ್‌ಗಳಿಗೆ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದರ ಜೊತೆಗೆ ಚೀನಾ ಗಡಿಯುದ್ದಕ್ಕೂ ಮುಂದಿನ ಮೂರು ವರ್ಷಗಳಲ್ಲಿ ಭೂಗತ ಆಶ್ರಯ ತಾಣಗಳನ್ನು ನಿರ್ಮಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ಮಾದರಿಯ ಯುದ್ಧ ತಂತ್ರಗಳಲ್ಲಿ ಭೂಮಿಯ ಮೇಲಿನ ಯಾವುದೇ ರಚನೆಗಳು ಸುಲಭವಾಗಿ ದಾಳಿಗೆ ತುತ್ತಾಗಬಹುದು. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಗಡಿ ಠಾಣೆಗಳಷ್ಟೇ ಸಂಖ್ಯೆಯ ಅತ್ಯಾಧುನಿಕ ಭೂಗತ ನಿರ್ಮಾಣಗಳನ್ನು ಸ್ಥಾಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕಪೂರ್ ತಿಳಿಸಿದ್ದಾರೆ.





