ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಖಂಡಿಸಿ ಪಂಜಾಬ್ ರೈತರು ‘ದೆಹಲಿ ಚಲೋ’ ಪ್ರತಿಭಟನೆ ಆರಂಭಿಸಿದ್ದಾರೆ. ಪಂಜಾಬ್‌ನಿಂದ ದೆಹಲಿಯ ಕಿಸಾನ್ ಘಾಟ್‌ಗೆ ತೆರಳುತ್ತಿದ್ದ ಸಾವಿರಾರು ರೈತರನ್ನು ಹರಿಯಾಣ- ಪಂಜಾಬ್‌ನ ಶಂಭು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ರಸ್ತೆಗಳಲ್ಲಿ ಬೃಹತ್ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ರೈತರು ಪ್ರಸ್ತುತ, ಶಂಭುಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸದ್ಯ, ಪೊಲೀಸರು ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಿರುವುದು 2024ರ ಫೆಬ್ರವರಿಯಲ್ಲಿ ನಡೆದಿದ್ದ ‘ದೆಹಲಿ ಚಲೋ-2’ ಚಳವಳಿಯ ಸಂದರ್ಭವನ್ನು ಮರುಕಳಿಸುವಂತೆ ಮಾಡಿದೆ. ಪ್ರಸ್ತುತ, ಪ್ರತಿಭಟನಾನಿರತ ರೈತರು ಶಂಭು ಗಡಿಯಲ್ಲೇ ಧರಣಿ ಕುಳಿತುಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮನ್ನು ಪಂಜಾಬ್‌ನಲ್ಲಿಯೇ ತಡೆಯಲು ಹರಿಯಾಣ ಪೊಲೀಸರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ಎರಡೂ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದೇಶ್ ಬಚಾವೋ ಮೋರ್ಚಾ’ ಎಂಬ ಜಂಟಿ ವೇದಿಕೆಯಡಿ ರೈತರು ಈ ಬೃಹತ್ ಪ್ರತಿಭಟನೆಗೆ ಒಗ್ಗೂಡಿದ್ದಾರೆ. ಪಂಜಾಬ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶದ ಹಲವು ರೈತ ಸಂಘಟನೆಗಳು ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (KMSC) ನಾಯಕರು ರೈತರ ಹೋರಾಟದಲ್ಲಿ ಜೊತೆಗೂಡಿವೆ.
2026ರ ಫೆಬ್ರವರಿಯಲ್ಲಿ ಭಾರತ-ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ನಡೆದಿವೆ. 2026ರ ಶರತ್ಕಾಲದ ವೇಳೆಗೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಅಂತಿಮಗೊಳ್ಳಲಿದೆ ಎಂದು ಉಭಯ ರಾಷ್ಡ್ರಗಳು ಹೇಳಿಕೊಂಡಿವೆ. ಈ ಒಪ್ಪಂದವು ಕೇವಲ ಕೆಲವು ವಸ್ತುಗಳಿಗೆ ಮಾತ್ರ ಸೀಮಿತವಾಗಿರದೆ ಕೃಷಿ, ಹಾಲಿನ ಉತ್ಪನ್ನಗಳು, ತಂತ್ರಜ್ಞಾನ, ಡಿಜಿಟಲ್ ವ್ಯಾಪಾರ ಹಾಗೂ ಸೇವಾವಲಯ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಅಮೆರಿಕವು ಭಾರತದ ಕೃಷಿ ಮತ್ತು ಡೈರಿ ಮಾರುಕಟ್ಟೆಗೆ ಸುಲಭ ಪ್ರವೇಶ ಪಡೆಯಲು ಈ ಒಪ್ಪಂದ ಅವಕಾಶ ಮಾಡಿಕೊಡಲಿದೆ. ಅಮೆರಿಕದ ಸೋಯಾಬೀನ್, ಜೋಳ, ಹತ್ತಿ, ಸೇಬು, ಬಾದಾಮಿ, ಕೋಳಿ ಮಾಂಸ ಹಾಗೂ ಡೈರಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭಾರತದ ಮೇಲೆ ಅಮೆರಿಕ ಆಗ್ರಹಿಸುತ್ತಿದೆ.
#WATCH | A large number of farmers reach Shambhu Border (Punjab-Haryana border) ahead of their scheduled march to Delhi today. Visuals from Patiala (Punjab) side. pic.twitter.com/dJtdEt0qti
— ANI (@ANI) July 21, 2026
ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಕೃಷಿ ವಲಯಕ್ಕೆ ತೀವ್ರ ಧಕ್ಕೆಯಾಗಲಿದೆ ಎಂದು ರೈತ ನಾಯಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. “ಅಮೆರಿಕ ಸರ್ಕಾರವು ಅಲ್ಲಿನ ರೈತರಿಗೆ ಕೋಟ್ಯಂತರ ರೂಪಾಯಿಗಳ ಭಾರೀ ಸಬ್ಸಿಡಿ ನೀಡುತ್ತದೆ. ಆದರೆ, ಭಾರತದಲ್ಲಿ 80%ಕ್ಕಿಂತ ಹೆಚ್ಚು ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕದ ಅಗ್ಗದ ಕೃಷಿ ಮತ್ತು ಹಾಲಿನ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಮುಕ್ತವಾಗಿ ಪ್ರವೇಶಿಸಿದರೆ, ಸ್ಥಳೀಯ ರೈತರು ಮತ್ತು ಸಣ್ಣ ಉದ್ಯಮಿಗಳು ಅವರೊಂದಿಗೆ ಸ್ಪರ್ಧಿಸಲಾಗದೆ ಸಂಪೂರ್ಣವಾಗಿ ನಾಶವಾಗಲಿದ್ದಾರೆ” ಎಂದು ರೈತರು ಆಕ್ರೋಶ-ಆತಂಕ ವ್ಯಕ್ತಪಡಿಸಿದ್ದಾರೆ.
VIDEO | Shambhu Border: Farmers gather at the Shambhu border ahead of their planned march to the national capital for a 'mahapanchayat' to protest against the proposed Indo-US trade deal.
— Press Trust of India (@PTI_News) July 21, 2026
(Full video available on PTI Videos – https://t.co/n147TvrpG7) pic.twitter.com/IJq6ubAmVY
“ಭಾರತದಲ್ಲಿ ಸುಮಾರು 8 ಕೋಟಿ ಗ್ರಾಮೀಣ ಕುಟುಂಬಗಳು ಜೀವನಾಧಾರಕ್ಕಾಗಿ ಡೈರಿ (ಹಾಲು ಉತ್ಪಾದನೆ) ವಲಯವನ್ನೇ ನಂಬಿಕೊಂಡಿವೆ. ಈ ಒಪ್ಪಂದದಿಂದ ದೇಶದ ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ಉದ್ಯೋಗಾವಕಾಶಗಳ ಮೇಲೆ ಭೀಕರ ಪರಿಣಾಮ ಬೀರಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ರೈತರು, ಕಾರ್ಮಿಕರು, ಹಾಲಿನ ಉತ್ಪಾದಕರು ಹಾಗೂ ಸಣ್ಣ ವ್ಯಾಪಾರಿಗಳೊಂದಿಗೆ ಸಮಗ್ರ ಸಮಾಲೋಚನೆ ನಡೆಸದೆ ಯಾವುದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕಬಾರದು” ಎಂದು ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.




