ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆಯುತ್ತಿದೆ. ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮತ್ತು ಬಂಧನಗಳ ನಡುವೆಯೂ Gen Z ಯುವಕರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಬದಲಿಗೆ ತಮ್ಮದೇ ಶೈಲಿಯಲ್ಲಿ ಇನ್ನಷ್ಟು ತೀವ್ರಗೊಳಿಸುತ್ತಿದ್ದಾರೆ. ಇದೀಗ ಪೊಲೀಸರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏಕಾಏಕಿ ರಾಷ್ಟ್ರಗೀತೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪ್ರತಿಭಟನಾಕಾರರತ್ತ ಪೊಲೀಸರು ಮುನ್ನಗ್ಗುತ್ತಿದ್ದಂತೆ ವಿದ್ಯಾರ್ಥಿಗಳು ಹಠಾತ್ತನೆ ‘ಜನ ಗಣ ಮನ’ ಹಾಡಲು ಆರಂಭಿಸಿದರು. ರಾಷ್ಟ್ರಗೀತೆ ಕೇಳುತ್ತಿದ್ದಂತೆ ಪೊಲೀಸರು ಕೆಲ ಕ್ಷಣಗಳ ಕಾಲ ಹಿಂದೆ ಸರಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಕ್ಷಣವನ್ನು ಅನೇಕರು “Mother India still protecting us all”, “Got a breather for 52 seconds” ಎಂಬ ಶೀರ್ಷಿಕೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಈಗ ಕೋಟ್ಯಂತರ ವೀಕ್ಷಣೆ ಪಡೆದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.
ಜೆನ್ Z ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನ ಸಾಮಾಜಿಕ ಜಾಲತಾಣಗಳ ಭಾಷೆಯಲ್ಲಿ ಮರುರೂಪಿಸುತ್ತಿದ್ದಾರೆ. ಪೊಲೀಸ್ ಚೇಸ್, ಅಶ್ರುವಾಯು, ಬ್ಯಾರಿಕೇಡ್ಗಳು, ಓಟ.. ಇವೆಲ್ಲವನ್ನೂ ಮೀಮ್, ರೀಲ್ಸ್, ಪಾಪ್ ಸಂಸ್ಕೃತಿ ಮತ್ತು ಸಂಗೀತದ ಮೂಲಕ ಹೊಸ ರೀತಿಯಲ್ಲಿ ದಾಖಲಿಸುತ್ತಿದ್ದಾರೆ.



ಜಂತರ್ ಮಂತರ್ನಲ್ಲಿ ಸ್ಪೈಡರ್ಮ್ಯಾನ್, ಡೋರಾ ದ ಎಕ್ಸ್ಪ್ಲೋರರ್, ಪೊಕ್ಮಾನ್, ಟಿ-ರೆಕ್ಸ್ ಸೇರಿದಂತೆ ವಿವಿಧ ಪಾತ್ರಗಳ ವೇಷಧಾರಿಗಳು ಕಾಣಿಸಿಕೊಂಡಿದ್ದು ಗಮನ ಸೆಳೆದಿದೆ. “ಇಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ; ಅಲ್ಲಿ ಟೇಲರ್ ಸ್ವಿಫ್ಟ್ ಮದುವೆಯ ಫೋಟೋ ಕೂಡ ಲೀಕ್ ಆಗಿಲ್ಲ” ಎಂಬ ಫಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇನ್ನೊಂದೆಡೆ, ಪೊಲೀಸರು ಬೆನ್ನಟ್ಟಿದ ವಿಡಿಯೊಗಳಿಗೆ ಬಾಲಿವುಡ್ ಹಾಡುಗಳನ್ನು ಜೋಡಿಸಿ ರೀಲ್ಸ್ ಮಾಡುವುದು, ಪ್ರತಿಭಟನೆಯನ್ನೇ ‘ಕಾರ್ಡಿಯೋ’ ಎಂದು ಹಾಸ್ಯ ಮಾಡುವುದು, ಅಶ್ರುವಾಯು ಪ್ರಯೋಗವನ್ನು PUBG ಆಟದ ದೃಶ್ಯಗಳಿಗೆ ಹೋಲಿಸಿ ಮೀಮ್ ಮಾಡುವುದು ಸೇರಿದಂತೆ ಹಲವು ಸೃಜನಾತ್ಮಕ ವಿಡಿಯೊಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು: ಕಾಂಗ್ರೆಸ್ ಸಂಸದರ ತುರ್ತು ಸಭೆ ಕರೆದ ರಾಹುಲ್ ಗಾಂಧಿ
ಪ್ರತಿಭಟನೆಗೆ ತೆರಳುವ ಮುನ್ನವೇ ‘Get Ready With Me (GRWM)’ ರೀಲ್ಸ್ ಮಾಡುವುದು, ವಿಮಾನ ಹಾಗೂ ರೈಲಿನಲ್ಲಿ ದೆಹಲಿಗೆ ಹೊರಟ ಕ್ಷಣಗಳನ್ನು ಸಂಗೀತ ಕಾರ್ಯಕ್ರಮಕ್ಕೆ ತೆರಳುತ್ತಿರುವಂತೆ ಹಂಚಿಕೊಳ್ಳುವುದು, ಜಂತರ್ ಮಂತರ್ನಲ್ಲೇ ‘ಸಂದೇಶೇ ಆತೇ ಹೈ’ ಸೇರಿದಂತೆ ದೇಶಭಕ್ತಿ ಗೀತೆಗಳನ್ನು ಹಾಡುವುದು, ಪೊಲೀಸರು ಜಲಫಿರಂಗಿ ಬೀಸಿದರೆ, ಅದೇ ನೀರಿನಲ್ಲಿ ರೇನ್ ಡಾನ್ಸ್ ಮಾಡಿ ಎಂಜಾಯ್ ಮಾಡುವುದು.. ಇವೆಲ್ಲವೂ ಈ ಪ್ರತಿಭಟನೆಯ ವಿಶಿಷ್ಟ ಮುಖವಾಗಿ ಹೊರಹೊಮ್ಮಿವೆ.
ಪ್ರತಿಭಟನೆ ಮತ್ತು ಸಾಮಾಜಿಕ ಮಾಧ್ಯಮದ ಟ್ರೆಂಡ್ಗಳನ್ನು ಒಂದೇ ವೇದಿಕೆಯಲ್ಲಿ ಬೆರೆಸಿರುವ ಈ ಜೆನ್ Z ಶೈಲಿ, ಭಾರತದ ವಿದ್ಯಾರ್ಥಿ ಚಳವಳಿಗಳಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.





