ಮಹಾರಾಷ್ಟ್ರ ಸರ್ಕಾರ ತಮ್ಮ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ಮರಾಠಿಗರಿಗೆ ಶೇ.10ರಷ್ಟು ಮೀಸಲಾತಿಗೆ ಆಗ್ರಹಿಸಿ ಮನೋಜ್ ಜರಾಂಗೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಸಂಜೆ ಕೈಬಿಟ್ಟಿರುವುದಾಗಿ ಘೋಷಿಸಿದ್ದಾರೆ.
“ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು” ಎಂದು ಹೋರಾಟಗಾರ ಮನೋಜ್ ಜರಾಂಗೆ ಹರ್ಷ ವ್ಯಕ್ತಪಡಿಸಿದರು.
ಕಳೆದ ಐದು ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ದಕ್ಷಿಣ ಮುಂಬೈಯ ಆಜಾದ್ ಮೈದಾನದಲ್ಲಿ ಐದು ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆಜಾದ್ ಮೈದಾನವನ್ನು ಖಾಲಿ ಮಾಡುವಂತೆ ಮುಂಬೈ ಪೊಲೀಸರು ಮಂಗಳವಾರ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಮರಾಠಿಗರಿಗೆ ಮೀಸಲಾತಿ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವವರು ಬಾಂಬೆ ಹೈಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಪೊಲೀಸರು ವಿಧಿಸಿದ್ದ ಪ್ರತಿಭಟನೆ ಪೂರ್ವ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜರಾಂಗೆ ಅವರಿಗೆ ನೋಟಿಸ್ ನೀಡಲಾಗಿತ್ತು.
ನಮ್ಮ ಪ್ರತಿಭಟನೆಗೆ ಸಂದ ಜಯವಾಗಿದೆ ಎಂದು ಜರಾಂಗೆ ಪ್ರ ತಿಕ್ರಿಯಿಸಿದ್ದಾರೆ. ಮರಾಠವಾಡ ಪ್ರದೇಶದ ಮರಾಠಿ ಸಮುದಾಯವನ್ನು ಕುಣಬಿಗಳೆಂದು ಗುರುತಿಸಬೇಕು ಹಾಗೂ ಒಬಿಸಿ ಜಾತಿಗೆ ಸೇರಿಸ ಬೇಕೆಂಬ ನಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಒಪ್ಪಿ ಪತ್ರವನ್ನು ನೀಡಿದೆ ಎಂದು ಜರಾಂಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಾಣಕಳೆದುಕೊಂಡ ಕುಟುಂಬ ಸದಸ್ಯರಿಗೆ ಒಂದು ವಾರದೊಳಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗಳನ್ನು ನೀಡುವುದಾಗಿಯೂ ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.