ಸೋಮವಾರ ಜಾರಿಗೆ ಬಂದ ಜಿಎಸ್‌ಟಿ ಪರಿಷ್ಕೃತ ದರವನ್ನು ನಾವು ಬೆಂಬಲಿಸುತ್ತೇವೆ. ಆದರೆ, ಕೇಂದ್ರ ಸರ್ಕಾರವು ದರ ಕಡಿತದ ಎಲ್ಲ ಹೊರೆಯನ್ನೂ ರಾಜ್ಯಗಳ ಮೇಲೆ ಹಾಕಿದೆ. ಇದರಿಂದಾಗಿ, ರಾಜ್ಯಗಳಿಗೆ ಕನಿಷ್ಠ 1 ರಿಂದ 1.5 ಲಕ್ಷ ಕೋಟಿ ರೂ. ಆದಾಯ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
“ದರ ತರ್ಕಬದ್ಧಗೊಳಿಸುವಿಕೆ ಮತ್ತು ದರ ಕಡಿತದ ಪ್ರಸ್ತಾಪವನ್ನು ನಾವು ಬೆಂಬಲಿಸಿದ್ದೇವೆ. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಆದರೆ, ಈ ದರ ಕಡಿತದ ಎಲ್ಲ ಹೊರೆಯನ್ನು ಕೇಂದ್ರವು ರಾಜ್ಯಗಳ ಮೇಲೆ ಹಾಕಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರದ ಈ ಧೋರಣೆಯಿಂದ ರಾಜ್ಯಗಳು 1 ರಿಂದ 1.5 ಲಕ್ಷ ಕೋಟಿ ರೂ. ಆದಾಯ ಕಳೆದುಕೊಳ್ಳುವ ಸಾಧ್ಯತೆಯಿದೆ. ಪರಿಣಾಮ, ರಾಜ್ಯಗಳ ಹಣಕಾಸಿನ ಸ್ಥಿರತೆಯ ಮೂಲವೇ ನಾಶವಾಗಲಿದೆ” ಎಂದು ಕೃಷ್ಣ ಬೈರೇಗೌಡ ಹೇಳಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ.
“ಆದಾಯ ನಷ್ಟವು ರಾಜ್ಯಗಳು ಕೇಂದ್ರವನ್ನು ಅವಲಂಬಿಸುವಂತೆ ಮಾಡುತ್ತದೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯ ಮೂಲವನ್ನೇ ಹೊಡೆಯುತ್ತಿದೆ. ಕೇಂದ್ರ ಸರ್ಕಾರದ ನೀತಿಯು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ” ಎಂದು ಹೇಳಿದ್ದಾರೆ.
“ರಾಜ್ಯಗಳು ಆದಾಯ ಕಳೆದುಕೊಳ್ಳುತ್ತಿರುವಾಗ, ಕೇಂದ್ರವು 50,000 ರಿಂದ 60,000 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸುವ ಸಾಧ್ಯತೆಗಳಿವೆ. ಹೊಸ ದರದಿಂದ ಕೇಂದ್ರವು ಪ್ರಯೋಜನ ಪಡೆದರೆ, ರಾಜ್ಯಗಳು ಆದಾಯ ಕಳೆದುಕೊಳ್ಳುತ್ತವೆ. ನಮ್ಮ ಏಕೈಕ ಕಾಳಜಿ – ರಾಜ್ಯಗಳು ಆದಾಯ ನಷ್ಟ ಅನುಭವಿಸದಂತೆ ನೋಡಿಕೊಳ್ಳಬೇಕು ಎಂಬುದಾಗಿತ್ತು. ಆದರೆ, ನಮ್ಮ ಬೇಡಿಕೆಯನ್ನು ಕೇಂದ್ರ ಕಡೆಗಣಿಸಿದೆ” ಎಂದು ಸಚಿವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮತಗಳ್ಳತನ | ರಾಹುಲ್ ಗಾಂಧಿ ಗಂಭೀರ ಆರೋಪ, ಚು. ಆಯುಕ್ತರ ಲಜ್ಜೆಗೇಡಿ ಪ್ರತಿಕ್ರಿಯೆ ಮತ್ತು ತನಿಖೆಯ ತುರ್ತು
“ಕೇಂದ್ರ ಸರ್ಕಾರವು ‘ನನ್ನ ಅಭಿಪ್ರಾಯವನ್ನು ನಾನು ಹೇಳುತ್ತೇನೆ, ನಿಮ್ಮ ಅಭಿಪ್ರಾಯವನ್ನು ನೀವು ಹೇಳುತ್ತೀರಿ’ ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ರಾಜ್ಯಗಳಿಗೆ ಆದಾಯ ರಕ್ಷಣೆಯನ್ನು ಏಕೆ ಖಚಿತಪಡಿಸುವುದಿಲ್ಲ. ರಾಜ್ಯಗಳಿಗೆ ಆರ್ಥಿಕ ರಕ್ಷಣೆ ನೀಡಲು ಕೇಂದ್ರಕ್ಕೆ ಸಮಸ್ಯೆ ಏನು? ಕೇಂದ್ರವು ಮಾಡಬಹುದಾದ ಸುಲಭವಾದ ಕೆಲಸವೆಂದರೆ ಆದಾಯ ರಕ್ಷಣೆಗೆ ಒಪ್ಪಿಕೊಳ್ಳುವುದು” ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಹೊಸ ಜಿಎಸ್‌ಟಿ ದರವು ಸೋಮವಾರದಿಂದ ಜಾರಿಗೆ ಬಂದಿದೆ. ಹಲವಾರು ಗೃಹೋಪಯೋಗಿ ವಸ್ತುಗಳು, ಕಾರುಗಳು, ಬೈಕ್‌ಗಳು ಹಾಗೂ ಟಿವಿಗಳ ಮೇಲಿನ ಜಿಎಸ್‌ಟಿ ದರವು ಕಡಿಮೆಯಾಗಿದೆ. ಜಿಎಸ್‌ಟಿಯಲ್ಲಿ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ 5%ಗೆ ಇಳಿಕೆಯಾಗಿದ್ದರೆ, ಈ ಹಿಂದೆ, 28% ಜಿಎಸ್‌ಟಿ ಇದ್ದ ವಸ್ತುಗಳ ಮೇಲಿನ ಜಿಎಸ್‌ಟಿ ದರವು 18%ಗೆ ಕಡಿತವಾಗಿದೆ.