ಬಾಲಿವುಡ್ ನಟ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅವರ ಚಾಲಕ ಹಾಗೂ ಪಕ್ಕದಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಚಾಲಕ ಗಾಯಗೊಂಡಿದ್ದಾರೆ. ನಟ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಭಾರತದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿರುವ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಎಂಬವರು ಹೊಣೆ ಹೊತ್ತಿದ್ದಾರೆ. ಆದರೆ, ಈ ಹೇಳಿಕೆಯ ಸತ್ಯಾಸತ್ಯತೆ ಹಾಗೂ ದಾಳಿಯಲ್ಲಿ ಅವರ ಪಾತ್ರ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಪುಷ್ಪಾ ಪಾರ್ಕ್ ಸಮೀಪ, ಜುಹು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಟೈಗರ್ ಶ್ರಾಫ್ ತಮ್ಮ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದಾಳಿಯಲ್ಲಿ ಟೈಗರ್ ಶ್ರಾಫ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಚಾಲಕ ಫಿರ್ದೌಸ್ ಅವರ ಎಡಗೈಗೆ ಗಾಯವಾಗಿದೆ. ಆಟೋರಿಕ್ಷಾ ಚಾಲಕ ಚೌಹಾಣ್ ಅವರ ಎದೆಗೆ ಗುಂಡು ತಗುಲಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಟೈಗರ್ ಶ್ರಾಫ್ ಮತ್ತು ಅವರ ಚಾಲಕನನ್ನು ಮುಂಬೈನ ವಿಲೇ ಪಾರ್ಲೆಯಲ್ಲಿರುವ ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಟನಿಗೆ ಕೆಲವು ತರಚಿದ ಗಾಯಗಳಾಗಿದ್ದು, ಯಾವುದೇ ಗುಂಡೇಟು ತಗುಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಂದೆಡೆ, ಎದೆಗೆ ಗುಂಡು ತಗುಲಿರುವ ಆಟೋರಿಕ್ಷಾ ಚಾಲಕನನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡು, ಸಾಮಾಜಿಕ ಜಾಲತಾಣದ ಫೇಸ್ಬುಕ್ ಪೋಸ್ಟ್ನಲ್ಲಿ ಇಬ್ಬರು ದಾಳಿಯ ಹೊಣೆ ಹೊತ್ತಿದ್ದಾರೆ. ಅನಿಲ್ ಪಂಡಿತ್ ಪ್ರಕಟಿಸಿರುವುದಾಗಿ ವರದಿಯಾದ ಪೋಸ್ಟ್ನಲ್ಲಿ, ”ಎಲ್ಲ ಸಹೋದರರಿಗೆ ರಾಮ್ ರಾಮ್. ಇಂದು ಟೈಗರ್ ಶ್ರಾಫ್ಗೆ ನಡೆದ ಘಟನೆಯ ಜವಾಬ್ದಾರಿಯನ್ನು ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಹೊರುತ್ತೇವೆ. ನಾವು ಅವರಿಗೆ ಕರೆ ಮಾಡಿ ಕೆಲವು ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದ್ದೆವು. ಆದರೆ ಅವರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳಲಿಲ್ಲ. ಹೀಗಾಗಿ ಇಂದು ಅವರಿಗೆ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸಿದ್ದೇವೆ” ಎಂದು ಹೇಳಲಾಗಿದೆ.
ಇದೇ ಪೋಸ್ಟ್ನಲ್ಲಿ ಬಾಲಿವುಡ್ ಚಿತ್ರರಂಗದ ಇತರರಿಗೂ ಬೆದರಿಕೆ ಹಾಕಲಾಗಿದೆ. ”ಮುಂಬೈ ಚಿತ್ರರಂಗದಲ್ಲಿ ನಮ್ಮ ಮಾತನ್ನು ಕೇಳದವರು ಅಥವಾ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವವರು ಮುಂದಿನ ಗುರಿಯಾಗಲಿದ್ದಾರೆ. ಕಾದು ನೋಡಿ” ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ಇತರ ಗ್ಯಾಂಗ್ಗಳ ಹೆಸರಿನಲ್ಲಿ ಪ್ರಚಾರ ಪಡೆಯಲು ಪ್ರಯತ್ನಿಸುವವರಿಗೂ ಬೆದರಿಕೆ ಹಾಕಲಾಗಿದ್ದು, ಪೋಸ್ಟ್ನ ಕೊನೆಯಲ್ಲಿ ‘ಹುತಾತ್ಮರಿಗೆ ನಮನ’ ಎಂಬ ಉಲ್ಲೇಖವಿದೆ.
ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಚಲನವಲನ ಮತ್ತು ಅವರ ಗುರುತು ಪತ್ತೆಹಚ್ಚಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ವಿಧಿವಿಜ್ಞಾನ ತಂಡವು ಘಟನಾ ಸ್ಥಳದಲ್ಲಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದು, ಲಭ್ಯವಿರುವ ಸಾಕ್ಷ್ಯಗಳನ್ನು ವಿಶ್ಲೇಷಿಸುತ್ತಿದೆ. ಪ್ರಕರಣದ ತನಿಖೆಗಾಗಿ ಸುಮಾರು 15 ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಿಸಿಪಿ ಮೋಹಿತ್ ಗರ್ಗ್ ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ, ದಾಳಿಯಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಅಲ್ಲದೆ, ಟೈಗರ್ ಶ್ರಾಫ್ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಟೈಗರ್ ಶ್ರಾಫ್ ಭೇಟಿ ಮಾಡಿ, ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯ ಕುರಿತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿರುವುದಾಗಿ ತಿಳಿಸಿರುವ ಅವರು, ಟೈಗರ್ ಶ್ರಾಫ್ ಅವರ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಘಟನೆ ಅತ್ಯಂತ ಆತಂಕಕಾರಿ ಹಾಗೂ ಖಂಡನೀಯವಾಗಿದೆ. ಈ ಕುರಿತು ಪೊಲೀಸ್ ಆಯುಕ್ತರೊಂದಿಗೆ ಹಾಗೂ ಟೈಗರ್ ಶ್ರಾಫ್ ಅವರೊಂದಿಗೆ ಮಾತನಾಡಿದ್ದೇನೆ. ಆರೋಪಿಗಳನ್ನು ಬಂಧಿಸಿ ಅವರದೇ ಭಾಷೆಯಲ್ಲಿ ಉತ್ತರ ನೀಡಲಾಗುವುದು. ಮುಂಬೈ ಮತ್ತು ಅದರ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಪ್ರಸ್ತುತ ಆದ್ಯತೆ. ಅದು ಸಿನಿಮಾ ನಟರಾಗಿರಲಿ ಅಥವಾ ಸಾಮಾನ್ಯ ನಾಗರಿಕರಾಗಿರಲಿ, ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸುವುದು ಪೊಲೀಸ್ ಇಲಾಖೆ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದಿಲ್ಲ. ಮುಂಬೈನಲ್ಲಿ ಈ ಹಿಂದೆ 1990ರ ದಶಕದಲ್ಲಿಯೂ ದೊಡ್ಡ ಮಟ್ಟದ ಗ್ಯಾಂಗ್ವಾರ್ಗಳು ನಡೆದಿದ್ದವು. ಆ ಸಂದರ್ಭದಲ್ಲಿ ಮುಂಬೈ ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿದ್ದರು. ಯಾವುದೇ ಗ್ಯಾಂಗ್ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದರೆ ಅದನ್ನು ಸಹಿಸುವುದಿಲ್ಲ. ಯಾವುದೇ ಗ್ಯಾಂಗ್ಗೂ ವಿನಾಯಿತಿ ನೀಡುವುದಿಲ್ಲ. ಇದು ಮುಂಬೈ, ಇದು ಮಹಾರಾಷ್ಟ್ರ ಎಂದು ಶಿಂದೆ ಹೇಳಿದ್ದಾರೆ.

ಇದನ್ನೂ ಓದಿ: ಬಿಷ್ಣೋಯ್ ಎನ್ಕೌಂಟರ್ಗೆ 1,11,11,111 ರೂ. ಬಹುಮಾನ: ಕರ್ಣಿ ಸೇನೆ
ಇತ್ತೀಚಿನ ವರ್ಷಗಳಲ್ಲಿ ಮುಂಬೈನಲ್ಲಿ ಚಿತ್ರರಂಗದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಹಲವು ಘಟನೆಗಳು ವರದಿಯಾಗಿವೆ. ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ನಟ ಸಲ್ಮಾನ್ ಖಾನ್ ಅವರ ನಿವಾಸಗಳ ಹೊರಗೆ ನಡೆದ ಗುಂಡಿನ ದಾಳಿಗಳು ದೇಶಾದ್ಯಂತ ಗಮನ ಸೆಳೆದಿದ್ದವು. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಐದು ಸುತ್ತು ಗುಂಡು ಹಾರಿಸಲಾಗಿತ್ತು. ಈ ಘಟನೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತಿರುವುದಾಗಿ ಹೇಳಿಕೊಂಡಿತ್ತು. ಇದಕ್ಕೂ ಮೊದಲು, 2024ರ ಏಪ್ರಿಲ್ನಲ್ಲಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾದ ಹಲವು ವ್ಯಕ್ತಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿಕ್ಕಿ ಗುಪ್ತಾ, ಸಾಗರ್ ಪಾಲ್, ಹರ್ಪಾಲ್ ಸಿಂಗ್, ಸೋನುಕುಮಾರ್ ಬಿಷ್ಣೋಯ್ ಮತ್ತು ಮೊಹಮ್ಮದ್ ರಫೀಕ್ ಚೌಧರಿ ಎಂಬ ಐವರು ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಆರನೇ ಆರೋಪಿ ಅನುಜ್ ಕುಮಾರ್ ಥಾಪನ್ 2024ರ ಮೇ ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದನು.
ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆಸಲಾದ ದಾಳಿಯನ್ನು ಯಾರು ನಡೆಸಿದ್ದಾರೆ, ಅದರ ಹಿಂದಿನ ಉದ್ದೇಶವೇನು, ಸಾಮಾಜಿಕ ಜಾಲತಾಣದಲ್ಲಿ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡವರಿಗೂ ಘಟನೆಯಲ್ಲಿ ನೇರ ಸಂಬಂಧವಿದೆಯೇ ಎಂಬ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.





