ರಾಜಸ್ಥಾನದಲ್ಲಿ ಕೆಲವು ಸರ್ಕಾರಿ ಕಟ್ಟಡಗಳು ಕುಸಿದು ಬೀಳುತ್ತಿವೆ. ಇನ್ನೂ ಕೆಲ ಕಟ್ಟಡಗಳಿಗೆ ಬೆಂಕಿ ಬೀಳುತ್ತಿದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ ಸರ್ಕಾರಿ ಕಟ್ಟಡಗಳಿಗೆ ಏನಾಗುತ್ತಿದೆ ಎಂದು ರಾಜಸ್ಥಾನ ಹೈಕೋರ್ಟ್ ಪ್ರಶ್ನಿಸಿದೆ.
ಭಾನುವಾರ, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಆರು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಈ ಘಟನೆಗೂ ಮುನ್ನ, ಜುಲೈ ತಿಂಗಳಲ್ಲಿ ಝಲ್ವಾರ್ ಪ್ರದೇಶದ ಸರ್ಕಾರಿ ಶಾಲೆಯ ಕಟ್ಟಡವೊಂದು ಕುಸಿದು ಬಿದಿತ್ತು. ಆ ಘಟನೆಯಲ್ಲಿ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಈ ಘಟನೆಗಳ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ.
ಸರ್ಕಾರಿ ಕಟ್ಟಡಗಳಲ್ಲಾಗುತ್ತಿರುವ ಅವಘಡಗಳ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಮತ್ತು ಅಶೋಕ್ ಕುಮಾರ್ ಜೈನ್‌ರಿದ್ದ ಪೀಠವು, “ಸರ್ಕಾರಿ ಕಟ್ಟಡಗಳಿಗೆ ಏನಾಗುತ್ತಿದೆ? ಕೆಲವು ಕುಸಿದು ಬೀಳುತ್ತಿವೆ. ಕೆಲವು ಕಟ್ಟಡಗಳಿಗೆ ಬೆಂಕಿ ಬೀಳುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದೆ.
“ಸರ್ಕಾರವು ಇಂತಹ ದುರಂತಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಯಾವ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಭವಿಷ್ಯದ ಯೋಜನೆಗಳೇನು ಎಂಬುದರ ಕುರಿತು ಅಕ್ಟೋಬರ್ 9ರ ಒಳಗೆ ನ್ಯಾಯಾಲಯಕ್ಕೆ ಉತ್ತರ ನೀಡಬೇಕು” ಎಂದು ಕೋರ್ಟ್ ಸೂಚಿಸಿದೆ.