ಅನ್ಯಧರ್ಮದ ಸ್ನೇಹಿತೆಯನ್ನು ಭೇಟಿ ಮಾಡಲು ಆಕೆಯ ಮನೆಗೆ ತೆರಳಿದ್ದ ಮುಸ್ಲಿಂ ಯುವಕನ ಮೇಲೆ 10ಕ್ಕೂ ಹೆಚ್ಚು ಮಂದಿಯ ಪುಂಡರ ಗುಂಪೊಂದು ಹಲ್ಲೆ ನಡೆಸಿ, ಕುತ್ತಿಗೆಗೆ ನಾಯಿಯ ಬೆಲ್ಟ್ ಕಟ್ಟಿ ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಘಟನೆ ಶನಿವಾರ ನಡೆದಿದ್ದು ತಡವಾಗಿ ವರದಿಯಾಗಿದೆ.
ಘಟನೆ ಸಂಬಂಧ ಮಹಿಳೆಯ ದೂರಿನ ಆಧಾರದ ಮೇಲೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸುಮಾರು ಐದು ವರ್ಷಗಳಿಂದ ಪರಿಚಯವಿದ್ದ ಸ್ನೇಹಿತನೊಂದಿಗೆ ಮಹಿಳೆ ಮನೆಯಲ್ಲಿದ್ದಾಗ 10ರಿಂದ 12 ಮಂದಿ ಏಕಾಏಕಿ ಮನೆಗೆ ನುಗ್ಗಿದ್ದಾರೆ. ಬಳಿಕ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ತಾನು ತಡೆಯಲು ಯತ್ನಿಸಿದರೂ ಆರೋಪಿಗಳು ಕೇಳದೆ ಇಬ್ಬರನ್ನೂ ನಿಂದಿಸಿ, ಯುವಕನನ್ನು ತೀವ್ರವಾಗಿ ಥಳಿಸಿ, ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಲಖನೌ ಮೂಲದ ಈ ಮಹಿಳೆ ಕಳೆದ ಸುಮಾರು ಹತ್ತು ವರ್ಷಗಳಿಂದ ಹರಿದ್ವಾರದಲ್ಲಿ ವಾಸಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಯುವಕನನ್ನು ಮನೆಯ ಎದುರು ಕುಳ್ಳಿರಿಸಿ ಆತನ ಕುತ್ತಿಗೆಗೆ ನಾಯಿಯ ಸರ ಕಟ್ಟಿ ಆರೋಪಿಗಳು ಪ್ರಶ್ನಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಮಹಿಳೆಯ ಸಹೋದರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹರಿಯಾಣದ ಕರ್ನಾಲ್ ಮೂಲದ ಯುವಕ ಹರಿದ್ವಾರದಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬರುತ್ತಿದ್ದ. ಶನಿವಾರ ಕೆಲವರು ಮನೆ ಬಾಗಿಲು ತಟ್ಟಿದ ಬಳಿಕ ಒಳನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದರು. ರಕ್ತಸ್ರಾವವಾಗುತ್ತಿದ್ದರೂ ಹಲ್ಲೆ ನಿಲ್ಲಿಸದೆ, ಬಳಿಕ ಆತನನ್ನು ಹೊರಗೆ ಎಳೆದುಕೊಂಡು ಹೋಗಿ ಕುತ್ತಿಗೆಗೆ ನಾಯಿಯ ಕಾಲರ್ ಕಟ್ಟಿ ಅವಮಾನಿಸಿದರು ಎಂದು ಆರೋಪಿಸಿದ್ದಾರೆ.
ಯುವಕನನ್ನು ಸುಮಾರು ಮೂರು ಗಂಟೆಗಳ ಕಾಲ ಅವಮಾನಿಸಲಾಗಿದ್ದು, ನಂತರ ಪೊಲೀಸರು ಸ್ಥಳಕ್ಕೆ ಬಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. “ಆತನನ್ನು ಕೊಲೆ ಮಾಡಿದ್ದರೆ ಯಾರು ಹೊಣೆ ಹೊರುತ್ತಿದ್ದರು? ನಾಯಿಯಂತೆ ಥಳಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಅಕ್ರಮವನ್ನು ರಾಜಕೀಯಗೊಳಿಸಬೇಡಿ: ಸುಪ್ರೀಂ ಕೋರ್ಟ್
ಹಲ್ಲೆ ನಡೆಸಿದವರು ಯುವಕನ ಮೊಬೈಲ್ ಫೋನ್ ಸೇರಿದಂತೆ ಕೆಲವು ವೈಯಕ್ತಿಕ ವಸ್ತುಗಳನ್ನೂ ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು, ಗಲಭೆ, ಅಕ್ರಮ ಪ್ರವೇಶ, ಜೀವ ಬೆದರಿಕೆ ಹಾಗೂ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಅವಮಾನ ಮಾಡಿದ ಆರೋಪಗಳಡಿ ಆರೋಪಿ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ಹಾಗೂ ಇತರ ವಿಡಿಯೊ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ನಗರ ವಲಯಾಧಿಕಾರಿ ಶಿಶುಪಾಲ್ ಸಿಂಗ್ ನೆಗಿ ತಿಳಿಸಿದ್ದಾರೆ.





