ಶಾಲೆಯ ಶೌಚಾಲಯದಲ್ಲಿ ರಕತದ ಕಲೆ ಕಾಣಿಸಿದ ಕಾರಣಕ್ಕೆ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ವಿಕೃತಿ ಮರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯಾರು ಮುಟ್ಟಾಗಿದ್ದಾರೆ ಎಂಬುದನ್ನು ತಿಳಿಯಲು ಶಿಕ್ಷಕ ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಮುಖ್ಯಶಿಕ್ಷಕ ಮತ್ತು ಓರ್ವ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿರುವ ಖಾಸಗಿ ಶಾಲೆಯಲ್ಲಿ ಮಂಗಳವಾರ ಘಟನೆ ನಡೆದಿದೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಾಣಿಸಿದ್ದ ಕಾರಣಕ್ಕೆ, ಯಾವ ವಿದ್ಯಾರ್ಥಿನಿ ಮುಟ್ಟಾಗಿದ್ದಾರೆ ಎಂಬುದನ್ನು ತಿಳಿಯಲು ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿದ್ದಾರೆ. ಮುಟ್ಟಾದವರು ಮತ್ತು ಮುಟ್ಟಾಗದವರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರೆ ಎಂದು ಆರೋಪಿಸಲಾಗಿದೆ.
10 ರಿಂದ 12 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಬಟ್ಟೆ ಬಿಚ್ಚಿಸಿ ಪರೀಕ್ಷಿಸುವಂತೆ ಮಹಿಳಾ ಸಿಬ್ಬಂದಿಗೆ ಮುಖ್ಯ ಶಿಕ್ಷಕ ಸೂಚಿಸಿದ್ದರು. ಯಾರು ಮುಟ್ಟಾಗಿದ್ದಾರೆ ಎಂಬುದನ್ನು ತಿಳಿಯಲು ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರ ಒಳ ಉಡುಪನ್ನು ಮುಟ್ಟಿ ಪರೀಕ್ಷಿಸಿದ್ದಾರೆ. ಈ ವೇಳೆ, ಓರ್ವ ವಿದ್ಯಾರ್ಥಿನಿ ಸ್ಯಾನಿಟರಿ ಪ್ಯಾಡ್ ಧರಿಸಿದ್ದರು. ಆಕೆಯನ್ನು ಶಿಕ್ಷಕರು ಮತ್ತು ಕೆಲವು ವಿದ್ಯಾರ್ಥಿಗಳು ಅಪಮಾನಿಸಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?; ಪತ್ರಕರ್ತನ ಪಯಣ | ಕನ್ನಡ ಪತ್ರಿಕೋದ್ಯಮದ ಅರೆಶತಮಾನದ ನಿಷ್ಠುರ ಕಥನ
ಪ್ರಕರಣ ಸಂಬಂಧ ಮುಖ್ಯಶಿಕ್ಷಕ, ಇಬ್ಬರು ಸಹಾಯಕ ಶಿಕ್ಷಕರು, ಮಹಿಳಾ ಸಿಬ್ಬಂದಿ ಹಾಗೂ ಇಬ್ಬರು ಟ್ರಸ್ಟಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಖ್ಯಶಿಕ್ಷಕ ಮತ್ತು ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ತಿನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಮನಿಸಿ: ಮುಟ್ಟು ಒಂದು ಸಹಜ ಜೈವಿಕ ಪ್ರಕ್ರಿಯೆಯಾಗಿದ್ದರೂ, ಭಾರತದಲ್ಲಿ ಇದನ್ನು ಅಪವಿತ್ರವೆಂದು ಪರಿಗಣಿಸಿ, ಮುಟ್ಟಾದವರನ್ನು ಶೋಷಣೆಗೆ ಒಳಪಡಿಸುವ ಅನಿಷ್ಠ ಆಚರಣೆಗಳು ಇನ್ನೂ ಭಾರತದಲ್ಲಿ ಗಾಢವಾಗಿವೆ. ಈ ಮೂಢನಂಬಿಕೆಗಳಿಂದಾಗಿ ಮಹಿಳೆಯರನ್ನು ಮನೆಯಿಂದ ದೂರವಿಡುವುದು, ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸುವುದು, ಅಥವಾ ಸಾಮಾಜಿಕ ಕಾರ್ಯಕ್ರಮಗಳಿಂದ ಹೊರಗಿಡುವಂತಹ ತಾರತಮ್ಯದ ನಡವಳಿಕೆಗಳು ನಡೆಯುತ್ತವೆ. ಇದು ಮಹಿಳೆಯರ ಆತ್ಮಗೌರವ, ಶಿಕ್ಷಣ, ಮತ್ತು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.ಋತುಸ್ರಾವವನ್ನು ಅಪವಿತ್ರವೆಂದು ಕಾಣದೆ, ಇದನ್ನು ಮಹಿಳೆಯ ಆರೋಗ್ಯ ಮತ್ತು ಶಕ್ತಿಯ ಸಂಕೇತವಾಗಿ ಗೌರವಿಸುವ ಮನೋಭಾವ ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಸಬಲೀಕರಣ ಸಾಧ್ಯವಾಗುತ್ತದೆ.