ಚಿಲ್ಲರೆ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲೀಕನಿಗೆ ಬರೋಬ್ಬರಿ 141 ಕೋಟಿ ರೂ.ಗಳ ತೆರಿಗೆ ನೋಟಿಸ್‌ಅನ್ನು ಆದಾಯ ತೆರಿಗೆ ಇಲಾಖೆ ನೀಡಿದೆ. ನೋಟಿಸ್ ನೋಡಿ ಅಂಗಡಿ ಮಾಲೀಗ ದಂಗಾಗಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ನಯಾಗಂಜ್ ನಿವಾಸಿ ಸುಧೀರ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ. ಸುಧೀರ್ ಅವರು ತಮ್ಮ ಮನೆಯ ಭಾಗವೇ ಆಗಿರುವ ಸಣ್ಣ ಮಳಿಗೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಆದರೆ, ಅವರು ದೆಹಲಿಯಲ್ಲಿ ಆರು ಸಂಸ್ಥೆಗಳನ್ನು ನಡೆಸುತ್ತಿದ್ದು, 141 ಕೋಟಿ ರೂ. ವಹಿವಾಟು ನಡೆಸಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ ಸುಧೀರ್, “ದೆಹಲಿಯಲ್ಲಿ ಆರು ಸಂಸ್ಥೆಗಳನ್ನು ಸ್ಥಾಪಿಸಲು ನನ್ನ ಪಾನ್ ಕಾರ್ಡ್ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅವುಗಳ ವಹಿವಾಟಿಗೆ ನನ್ನ ಹೆಸರು ತೋರಿಸಲಾಗಿದೆ. ಆದರೆ, ಆ ಯಾವುದೇ ಕಂಪನಿಗಳೊಂದಿಗೆ ನನಗೆ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
ಸುಧೀರ್ ಅವರು ಖುರ್ಜಾ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. ಅವರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಠಾಣಾ ಅಧಿಕಾರಿ ಪಂಕಜ್ ರಾಯ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು, ಶೆಲ್ ಕಂಪನಿಗಳನ್ನು ಆರಂಭಿಸಲು, ಸಾಲ ಪಡೆಯಲು ಹಾಗೂ ಇತರ ಆರ್ಥಿಕ ವಂಚನೆಗಳಿಗಾಗಿ ಬೇರೆಯವರ ಪಾನ್ ಕಾರ್ಟ್‌ಗಳನ್ನು ಬಳಸಿಕೊಂಡು, ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಜನರು ಎಚ್ಚರಿಕೆಯಿಂದ ಇರಬೇಕು. ತಮ್ಮ ಕ್ರೆಡಿಟ್ ವರದಿಗಳನ್ನು ಆಗ್ಗಾಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.