ಡೊನಾಲ್ಡ್ ಟ್ರಂಪ್ 29 ಬಾರಿ ಕದನ ವಿರಾಮ ಮಾಡಿಸಿದ್ದು ನಾನೇ ಎಂದು ಹೇಳುತ್ತಾರೆ. ಅದು ಸುಳ್ಳಾದರೆ, ಪ್ರಧಾನಿ ಮೋದಿಗೆ ಧೈರ್ಯ ಇದ್ದರೆ ಸದನದಲ್ಲಿ ಟ್ರಂಪ್ ಸುಳ್ಳುಗಾರ ಎಂದು ಹೇಳಲಿ. ಇಂದಿರಾಗಾಂಧಿಯವರ ಅರ್ಧದಷ್ಟು ಧೈರ್ಯ ಇದ್ದರೆ ಹೇಳಿ ಬಿಡಲಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಅಪರೇಷನ್ ಸಿಂಧೂರದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ವೇಳೆ ಅವರು ಮಾತನಾಡಿದರು. ಈ ವೇಳೆ ಪಹಲ್ಗಾಮ್ ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಜೊತೆಗೆ ದಾಳಿಯ ಮಾಸ್ಟರ್ ಮೈಂಡ್ ಪಾಕ್ ಸೇನಾಧಿಕಾರಿ ಜನರಲ್ ಮುನೀರ್ ಔತಣಕೂಟಕ್ಕೆ ಹೋಗುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸೇನೆಯನ್ನು ಬಳಕೆ ಮಾಡಲು ರಾಜಕೀಯ ದೃಢ ಸಂಕಲ್ಪ ಇರಬೇಕು. ಸೇನೆಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಕೊಡಬೇಕು. 1971ರ ಯುದ್ಧ ಮತ್ತು ಆಪರೇಷನ್ ಸಿಂಧೂರವನ್ನು ರಾಜನಾಥ್ ಸಿಂಗ್ ಹೋಲಿಕೆ ಮಾಡಿದರು. ಆದರೆ 1971 ರಲ್ಲಿ ರಾಜಕೀಯ ಧೃಢ ಸಂಕಲ್ಪ ಇತ್ತು. ಜಾಗತಿಕವಾಗಿ ದೊಡ್ಡ ದೇಶಗಳು ಅಡ್ಡ ಬಂದವು. ಆದರೂ ಇಂದಿರಾಗಾಂಧಿ ಹೆದರದೇ ಸೇನೆಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದರು. ಅಂದು ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಶರಣಾದರು ಎಂದಿದ್ದಾರೆ.
ಆಪರೇಷನ್ ಸಿಂಧೂರದ ವೇಳೆ, ಪಾಕಿಸ್ತಾನಕ್ಕೆ ದಾಳಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು. ಇದನ್ನು ರಕ್ಷಣಾ ಸಚಿವರೇ ಹೇಳಿದ್ದಾರೆ. ಮಿಲಿಟರಿ ಸ್ಥಳಗಳ ಮೇಲೆ ದಾಳಿ ಮಾಡಲ್ಲ ಎಂದು ನಮ್ಮ ವಾಯುಸೇನೆಯನ್ನು ಕಳುಹಿಸಿದ್ದರು. ಇದರ ಅರ್ಥ ಏನು? ಸೇನೆಯನ್ನು ಕಟ್ಟಿಹಾಕಿದಂತೆ ಅಲ್ವೇ? ನೀವೂ ದಾಳಿಗೂ ಮುನ್ನವೇ ರಾಜಕೀಯ ದೃಢ ಸಂಕಲ್ಪ ತೋರಲೇ ಇಲ್ಲ. ನೀವು ಹೋರಾಟ ನಡೆಸಲು ಬಯಸುವುದಿಲ್ಲ. ನಿಮಗೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲ ಎಂದು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಪಾಕ್ ಮಂಡಿಯೂರಿ ಕ್ಷಮೆಯಾಚಿಸುವಾಗ, ಮೋದಿ ಸರ್ಕಾರ ಶರಣಾಗಿದ್ದೇಕೆ: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ಪಾಕಿಸ್ತಾನಕ್ಕೆ ಮಧ್ಯರಾತ್ರಿ ಫೋನ್ ಮಾಡಿ ಹೇಳುವ ಅಗತ್ಯ ಏನಿತ್ತು? ಇದು ಹೇಗಿದೆ ಎಂದರೆ ನಾನು ಬಂದು ಹೊಡೆಯುತ್ತೇನೆ. ನೀನು ವಾಪಸ್ ಹೊಡೆಯಬಾರದು ಎನ್ನುವಂತಿದೆ. ಪ್ರಧಾನಿಯವರ ಘನತೆ ಕಾಪಾಡಲು ಈ ಎಲ್ಲ ಪ್ರಯತ್ನ ಮಾಡಲಾಗಿದೆ. ಸೈನಿಕರು ಹುಲಿಗಳು, ನಾನು ಸೈನಿಕರನ್ನು ಭೇಟಿಯಾದಾಗ ಅವರ ಕೈ ಮುಟ್ಟುತ್ತೇನೆ. ಅವರು ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅಂತಹ ಹುಲಿಗಳ ಕೈ ಕಟ್ಟಿಹಾಕದೇ, ಬಿಟ್ಟು ಬಿಡಬೇಕು ಎಂದಿದ್ದಾರೆ.
ಎಲ್ಲ ದೇಶಗಳು ಭಯೋತ್ಪಾದಕ ದಾಳಿ ವಿರೋಧಿಸಿವೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನವನ್ನು ಯಾರು ಟೀಕಿಸಲಿಲ್ಲ. ಎಲ್ಲರೂ ಭಯೋತ್ಪಾದನೆ ವಿರೋಧ ಮಾಡಿದರು. ಒಂದೇ ಒಂದು ದೇಶ ಪಾಕಿಸ್ತಾನವನ್ನು ಟೀಕಿಸಲಿಲ್ಲ ಎಂದಿದ್ದಾರೆ.
ಹೋರಾಡಿದ್ದು ಸೇನೆ, ಕ್ರೆಡಿಟ್ ಬಯಸುತ್ತಿರೋದು ಮೋದಿ: ಪ್ರಿಯಾಂಕಾ ಗಾಂಧಿ ಕಿಡಿ
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆಯು ದೇಶಕ್ಕಾಗಿ ಹೋರಾಡಿತು. ಆದರೆ ಅದರ ಲಾಭವನ್ನು ಪ್ರಧಾನಿ ಮೋದಿ ಪಡೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು 11 ವರ್ಷದಿಂದ ಅಧಿಕಾರದಲ್ಲಿದ್ದೀರಿ. ನಿನ್ನೆ ಗೌರವ್ ಗೊಗೊಯ್ ಅವರು ಪಹಲ್ಗಾಮ್ ಬಗ್ಗೆ ಮಾತನಾಡುತ್ತಿದ್ದಾಗ ರಾಜನಾಥ್ ಸಿಂಗ್ ತಲೆಯಾಡಿಸುತ್ತಿದ್ದರು, ಗೃಹ ಸಚಿವರು ನಗುತ್ತಿದ್ದರು ಎಂದರು.
ಮುಂಬೈ ದಾಳಿ ನಡೆದಾಗ ಮನಮೋಹನ್ ಸಿಂಗ್ ಸರ್ಕಾರ ಏನೂ ಮಾಡಲಿಲ್ಲ ಅಂತ ಹೇಳಿದರು. ಆದರೆ ಅವರಿಗೆ ನೆನಪಿಲ್ಲ ಅನ್ನಿಸುತ್ತೆ, ದಾಳಿ ನಡೆಯುತ್ತಿದ್ದಾಗಲೇ ಮೂವರು ಉಗ್ರರು ಹತರಾದರು, ಬದುಕುಳಿದ ಒಬ್ಬನನ್ನು ಹಿಡಿದು ಗಲ್ಲಿಗೇರಿಸಲಾಯಿತು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಿಎಂ, ದೇಶದ ಗೃಹ ಸಚಿವರಾಗಿದ್ದವರು ರಾಜೀನಾಮೆ ಕೊಟ್ಟರು. ಆದರೆ ಉರಿ-ಪುಲ್ವಾಮಾ ದಾಳಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು, ಈಗ ರಕ್ಷಣಾ ಸಚಿವರಾಗಿದ್ದಾರೆ. ಅಮಿತ್ ಶಾ ಅವರ ಅಧಿಕಾರವಧಿಯಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಗಲಭೆಗಳು ನಡೆಯುತ್ತಿವೆ. ಅದೇ ಹಾದಿಯಾಗಿ ಪಹಲ್ಗಾಮ್ ದಾಳಿಯೂ ನಡೆಯಿತು. ರಾಜೀನಾಮೆ ಕೊಡದೇ ಈಗಲೂ ಗೃಹ ಸಚಿವರಾಗಿಯೇ ಇದ್ದಾರೆ ಎಂದು ಕುಟುಕಿದರು.