ಮಧ್ಯಪ್ರದೇಶದಲ್ಲಿ ಪ್ರತಿದಿನ ಸರಾಸರಿ ಏಳು ಮಂದಿ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಸೇರಿದ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ರಾಜ್ಯ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಬಹಿರಂಗಪಡಿಸಿದೆ.
ವಿರೋಧ ಪಕ್ಷದ ಶಾಸಕ ಆರಿಫ್ ಮಸೂದ್ ಅವರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ರಾಜ್ಯ ಸರ್ಕಾರ, “2022ರಿಂದ 2024ರ ನಡುವೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಟ್ಟು 7,418 ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ದಾಖಲಾಗಿವೆ” ಎಂದು ತಿಳಿಸಿದೆ. ಈ ದತ್ತಾಂಶದನ್ವಯ, ಪ್ರತಿ ದಿನ ಸರಾಸರಿ ಏಳು ಮಂದಿ ಪರಿಶಿಷ್ಟ ಜಾತಿ ಹಾಗೂ ಆದಿವಾಸಿ ಮಹಿಳೆಯರ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ನಡೆಯುತ್ತಿದೆ.
ಇದೇ ಅವಧಿಯಲ್ಲಿ ಈ ಸಮುದಾಯಗಳ 558 ಮಹಿಳೆಯರನ್ನು ಕೊಲೆ ಮಾಡಲಾಗಿದ್ದರೆ, 338 ಸಂತ್ರಸ್ತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸಂಗತಿಯೂ ಈ ದತ್ತಾಂಶದಿಂದ ಬಯಲಾಗಿದೆ. ಈ ಅಂಕಿಸಂಖ್ಯೆಗಳಿಂದ ಕೌಟುಂಬಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಕುರಿತು ಕಳವಳಕಾರಿ ಸಂಗತಿಗಳೂ ಬೆಳಕಿಗೆ ಬಂದಿವೆ.
ಸರಿಸುಮಾರು 1,906 ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಗುರಿಯಾಗಿದ್ದು, ಇದರರ್ಥ ಪ್ರತಿ ದಿನ ಇಬ್ಬರು ಮಹಿಳೆಯರು ತಮ್ಮ ಸ್ವಂತ ಮನೆಗಳಲ್ಲೇ ಕೌಟುಂಬಿಕ ದೌರ್ಜನ್ಯಕ್ಕೀಡಾಗುತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಇದರೊಂದಿಗೆ 5,983 ಲೈಂಗಿಕ ಕಿರುಕುಳ ಪ್ರಕರಣಗಳೂ ದಾಖಲಾಗಿದ್ದು, ನಿತ್ಯ ಸುಮಾರು ಐವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮಹಿಳೆಯರ ಮೇಲಿನ ಒಟ್ಟು 44,978 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರರ್ಥ, ಮಧ್ಯಪ್ರದೇಶದಲ್ಲಿ ಈ ಶೋಷಿತ ಸಮುದಾಯಗಳ ಮಹಿಳೆಯರ ಮೇಲೆ ಪ್ರತಿ ನಿತ್ಯ ಸರಾಸರಿ 41 ಅಪರಾಧ ಘಟನೆಗಳು ನಡೆಯುತ್ತಿವೆ ಎಂದಾಗಿದೆ.
ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯ ಪೈಕಿ, ಅಂದಾಜು ಒಟ್ಟು ಶೇ. 38ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿವೆ. ಈ ಪೈಕಿ ಶೇ. 16ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳಿದ್ದರೆ, ಶೇ. 22ರಷ್ಟು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸಮುದಾಯಗಳಿವೆ.