ಭಾರತ-ಪಾಕ್ ನಡುವೆ ಸೇನಾ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆ ಭಾರತದ ಭದ್ರತಾ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಿಬ್ಬಂದಿಯೊಂದಿಗೆ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಭದ್ರತಾ ಸನ್ನಿವೇಶವನ್ನು ಪರಿಶೀಲಿಸಲು ಮತ್ತು ಭವಿಷ್ಯದ ಕ್ರಮಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್, ಮೂರೂ ಪಡೆಗಳು ಮುಖ್ಯಸ್ಥರ, ಸೇನಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಅವರೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ.
ಭಾರತದ ನೆಲೆಗಳ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಭದ್ರತಾ ಪಡೆಗಳು ಪ್ರಮಾಣಾನುಗುಣವಾಗಿ ಮತ್ತು ಸಮರ್ಪಕವಾಗಿ ತಿರುಗೇಟು ನೀಡುತ್ತಿವೆ. ಉಭಯ ರಾಷ್ಟ್ರಗಳ ನಡುವೆ ತ್ವೇಷಮಯ ವಾತಾವರಣ ಇದೆ.
ಇದನ್ನೂ ಓದಿದ್ದೀರಾ? ಬೆಂಗಳೂರು ಮೇಲೂ ಪಾಕ್ ದಾಳಿ ಹೇಳಿಕೆ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ
ಭಾರತದ ಮುಂಚೂಣಿ ನೆಲೆಗಳತ್ತ ಪಾಕಿಸ್ತಾನ ತನ್ನ ಸೇನೆಯನ್ನು ಕಳುಹಿಸುತ್ತಿದೆಯೆಂದು ಭಾರತ ಗುರುವಾರ ಹೇಳಿದೆ. ಉಭಯ ರಾಷ್ಟ್ರಗಳು ಸೇನಾ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸೋಫಿಯಾ ಖುರೇಷಿ ಮಾತನಾಡಿ, “ಗಡಿ ಪ್ರದೇಶಗಳಿಗೆ ಪಾಕಿಸ್ತಾನ ತನ್ನ ಸೇನೆಯನ್ನು ಕಳುಹಿಸುತ್ತಿದೆ” ಎಂದು ತಿಳಿಸಿದ್ದರು.