ಭಾರತ ಇಷ್ಟು ಬೇಗ ಟ್ರಂಪ್ ಅವರ ಬದಲಾದ ವರಸೆಯನ್ನು ನಂಬಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಲಹೆ ನೀಡಿದ್ದಾರೆ.
ಭಾರತ-ಅಮೆರಿಕ ಸಂಬಂಧದ ಬಗೆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದಲಾದ ಧ್ವನಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಏಕಾಏಕಿ ಮೃದು ಧೋರಣೆ ಅನುಮಾನಾಸ್ಪದವಾಗಿದೆ” ಎಂದಿದ್ದಾರೆ.
“ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಬಂಧ ಸುಧಾರಣೆ ಪ್ರಕ್ರಿಯೆಯಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
“ಸಂಬಂಧ ಸುಧಾರಣೆಯಲ್ಲಿ ನಾಯಕರು ಹೆಜ್ಜೆ ಇಡುವ ಮೊದಲು, ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಕೆಲವು ದುರಸ್ತಿ ಕಾರ್ಯಗಳನ್ನು ಮಾಡಬೇಕಿದೆ. ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಸಂದೇಶಕ್ಕೆ ಪ್ರಧಾನಿ ಮೋದಿ ಇಷ್ಟು ಬೇಗ ಪ್ರತಿಕ್ರಿಯಿಸಬಾರದಿತ್ತು. ಹದಗೆಟ್ಟಿರುವ ಸಂಬಂಧಗಳನ್ನು ಮತ್ತೆ ಹಳಿಗೆ ತರುವಲ್ಲಿ ಅವಸರ ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.
“ಸುಂಕ ಸಮರದಿಂದಾಗಿ ಭಾರತೀಯರು ಎದುರಿಸಿದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಟ್ರಂಪ್ ಅವರಿಂದ ಉಂಟಾದ ನೋವನ್ನು ಇಷ್ಟು ಬೇಗ ಮರೆಯಬಾರದು. ನಾನು ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಸ್ವರವನ್ನು ಎಚ್ಚರಿಕೆಯ ಮನೋಭಾವದಿಂದ ಸ್ವಾಗತಿಸುತ್ತೇನೆ. ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಮಾಡುವ ಯಾವುದೇ ಅವಸರ, ನಮಗೆ ನಷ್ಟ ತರಬಹುದು” ಎಂದು ಶಶಿ ತರೂರ್ ತಿಳಿಸಿದ್ದಾರೆ.