ಭಾರತೀಯ ಕಾನೂನು ವ್ಯವಸ್ಥೆಯು ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುತ್ತದೆಯೇ ಹೊರತು, ‘ಬುಲ್ಡೋಜರ್ ನಿಯಮ’ದಿಂದ ಅಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
ಮಾರಿಷಸ್ನಲ್ಲಿ ನ್ಯಾಯಶಾಸ್ತ್ರಜ್ಞ ಸರ್ ಮೌರಿಸ್ ರೌಲ್ಟ್ ಅವರ ಸ್ಮರಣಾರ್ಥ ನಡೆದ ‘ಬೃಹತ್ ಪ್ರಜಾಪ್ರಭುತ್ವದಲ್ಲಿ ಕಾನೂನಿನ ಆಳ್ವಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬುಲ್ಡೋಜರ್ ನ್ಯಾಯ’ವನ್ನು ಸಮ್ಮತಿಸುವುದಿಲ್ಲ ಎಂಬ ಸುಪ್ರೀಂ ಕೋರ್ಟ್ನ ತೀರ್ಪನ್ನು ಪುನರುಚ್ಛರಿಸಿದರು. ಆ ವಿಚಾರವನ್ನು ಅವರು ಒತ್ತಿ ಹೇಳಿದರು.
2024ರ ನವೆಂಬರ್ನಲ್ಲಿ ‘ಬುಲ್ಡೋಜರ್ ನ್ಯಾಯ’ ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, “ಯಾವುದೇ ಪ್ರಕರಣಗಳಲ್ಲಿನ ಆರೋಪಿಗಳ ಮನೆಗಳನ್ನು ಕೆಡವುವುದು ಕಾನೂನು ಪ್ರಕ್ರಿಯೆಗಳನ್ನು ಬದಿಗೊತ್ತುತ್ತವೆ. ಕಾನೂನಿನ ನಿಯಮವನ್ನು ಉಲ್ಲಂಘಿಸುತ್ತವೆ. ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ಆಶ್ರಯ ಪಡೆಯುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ಹೇಳಿತ್ತು.
“ಕಾರ್ಯಾಂಗವು ನ್ಯಾಯಾಧೀಶ, ತೀರ್ಪುಗಾರ ಮತ್ತು ಮರಣದಂಡನೆಕಾರನ ಪಾತ್ರಗಳನ್ನು ಏಕಕಾಲದಲ್ಲಿ ವಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಗವಾಯಿ ಹೇಳಿದರು. ಸಂವಿಧಾನದ ಪ್ರತಿಯೊಂದು ಅಂಶವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಅಧಿಕಾರವನ್ನು ಕಡಿತಗೊಳಿಸಿದ 1973ರ ಕೇಶವಾನಂದ ಭಾರತಿ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್ನ ವಿವಿಧ ಹೆಗ್ಗುರುತು ತೀರ್ಪುಗಳನ್ನು ಸಿಜೆಐ ಉಲ್ಲೇಖಿಸಿದರು.
ಈ ಲೇಖನ ಓದಿದ್ದೀರಾ?: ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
“ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನಂತರದ ಕಳೆದ 75 ವರ್ಷಗಳಲ್ಲಿ, ಕಾನೂನು ನಿಯಮದ ಪರಿಕಲ್ಪನೆಯು ಕಾನೂನು ಪಠ್ಯಗಳನ್ನು ಮೀರಿ ವಿಕಸನಗೊಂಡಿದೆ. ಸಾಮಾಜಿಕ, ರಾಜಕೀಯ ಹಾಗೂ ಸಾಂವಿಧಾನಿಕ ಚರ್ಚೆಯನ್ನು ಸಮಾನವಾಗಿ ವ್ಯಾಪಿಸಿದೆ” ಎಂದು ಹೇಳಿದರು.
ಸಾಮಾಜಿಕ ಕ್ಷೇತ್ರದಲ್ಲಿ, ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಾನೂನು ನಿಯಮದ ಭಾಷೆಯೇ ದಬ್ಬಾಳಿಕೆಯ ವಿರುದ್ಧ ಜನರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಕಾರಣವಾಗಿದೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.