ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1% ಮೀಸಲಾತಿ ನೀಡದೆ, ಅವರನ್ನು ಬಲಗೈ ಸಮುದಾಯಗಳೊಂದಿಗೆ ಸೇರಿಸಿ, ಮೀಸಲಾತಿ ನೀಡಲಾಗಿದೆ. ಇದರಿಂದಾಗಿ, ಅಲೆಮಾರಿ ಸಮುದಾಯಗಳು ಮತ್ತೆ ವಂಚಿತವಾಗುತ್ತವೆ ಎಂದು ಒಳಮೀಸಲಾತಿ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸುಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಹಕ್ಕೋತ್ತಾಯವನ್ನು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಕ್ಕೆ ತರುವ ಉದ್ದೇಶದಿಂದ ‘ದೆಹಲಿ ಚಲೋ’ ಹೋರಾಟ ನಡೆಸುತ್ತಿದ್ದು, ಪ್ರತಿಭಟನಾಕಾರರು ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 2ರಿಂದ ಪ್ರತಿಭಟನೆ ಆರಂಭಿಸಿದ್ದಾರೆ.
ಅಲೆಮಾರಿ ಸಮುದಾಯಗಳ ನೂರಾರು ಜನರು ಹಾಗೂ ಒಳಮೀಸಲಾತಿ ಹೋರಾಟಗಾರರು ಕರ್ನಾಟಕದಿಂದ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಉನ್ನತ ನಾಯಕರನ್ನು ಭೇಟಿ ಮಾಡಿ, ತಮ್ಮ ಹಕ್ಕೊತ್ತಾಯವನ್ನು ಅವರ ಗಮನಕ್ಕೆ ತರಲು ಮುಂದಾಗಿದ್ದಾರೆ. ‘ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿ ನೀಡುವಂತೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ನಿರ್ದೇಶನ ನೀಡುಬೇಕು’ ಎಂದು ಒತ್ತಾಯಿಸಲಿದ್ದಾರೆ.
“ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆರೋಗವು, ವರ್ಗ 1: ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳು – 1% ಮೀಸಲಾತಿ, ವರ್ಗ 2: ಹೆಚ್ಚು ಹಿಂದುಳಿದ ಮಾದಿಗರು ಮತ್ತು ಸಂಬಂಧಿತ ಜಾತಿಗಳು – 6% ಮೀಸಲಾತಿ, ವರ್ಗ 3: ಹಿಂದುಳಿದ ಹೊಲಯರು ಮತ್ತು ಸಂಬಂಧಿತ ಜಾತಿಗಳು – 5% ಮೀಸಲಾತಿ, ವರ್ಗ 4: ಕಡಿಮೆ ಹಿಂದುಳಿದ ಲಂಬಾಣಿ, ಭೋವಿ, ಕೊರಚ ಹಾಗೂ ಸಂಬಂಧಿತ ಜಾತಿಗಳು – 4% ಮೀಸಲಾತಿ, ವರ್ಗ 5: ತಮ್ಮನ್ನು AK, AD ಹಾಗೂ AA ಎಂದು ಗುರುತಿಸಿಕೊಳ್ಳುವ ಇತರ ಜಾತಿಗಳು – 1% ಮೀಸಲಾತಿ ಹಂಚಿಕೆ ಮಾಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರವು ಕೆಲವು ಸಂಪುಟ ಸಚಿವರ ಒತ್ತಡಕ್ಕೆ ಮಣಿದು, ಪ್ರಬಲ ರಾಜಕೀಯ ಲಾಬಿಗಳ ಬೇಡಿಕೆಗಳನ್ನು ಪೂರೈಸುವ ಆತುರದಲ್ಲಿ, ದಲಿತ ಅಲೆಮಾರಿ ಸಮುದಾಯವನ್ನು ಬಲಿಯ ಕುರಿಯನ್ನಾಗಿ ಮಾಡಲಾಗಿದೆ. ಹೆಚ್ಚು ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಕಡಿಮೆ ಹಿಂದುಳಿದ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಗಿದೆ. ಇದು ರಾಜಕೀಯ ಅಪರಾಧ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆಗೆ ವಿರೋಧ: OBCಗಳನ್ನು ವಂಚಿಸುವ ತಂತ್ರ
“ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ, ಅಲೆಮಾರಿ ಸಮುದಾಯಗಳಿಗೆ ಘನತೆಯ ಜೀವನ ನಡೆಸಲು ಒಂದು ನೆಲೆಯೂ ಸಿಕ್ಕಿಲ್ಲ. ಇಂದಿಗೂ, ನಮ್ಮ ಹೆಚ್ಚಿನ ಜನರು ಬೀದಿ ನಾಯಿಗಳ ಪಕ್ಕದಲ್ಲಿ ರಸ್ತೆಬದಿಯ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಸಮಾಜ ನಮ್ಮನ್ನು ಸ್ವೀಕರಿಸಿಲ್ಲ; ನಮ್ಮನ್ನು ಬೀದಿ ದನಗಳಂತೆ ಸ್ಥಳದಿಂದ ಸ್ಥಳಕ್ಕೆ ಓಡಿಸಲಾಗುತ್ತಿದೆ. ನಮ್ಮ ಸಮುದಾಯದಿಂದ ನಮಗೆ ಯಾವುದೇ ರಾಜಕಾರಣಿ ಇಲ್ಲ, ಉನ್ನತ ಅಧಿಕಾರಿ ಇಲ್ಲ, ಪದವೀಧರರು ಇಲ್ಲ. ಕರ್ನಾಟಕದ ಪ್ರತಿಯೊಬ್ಬ ಚಿಂತಕ ವ್ಯಕ್ತಿಗೂ ಅಲೆಮಾರಿಗಳು ಅತ್ಯಂತ ವಂಚಿತ ಮತ್ತು ಅಂಚಿನಲ್ಲಿರುವ ಸಮುದಾಯ ಎಂಬುದು ತಿಳಿದಿದೆ. ಆದ್ದರಿಂದ, ರಾಜ್ಯಾದ್ಯಂತ ಜನರು ಸರ್ಕಾರದ ನಿರ್ಧಾರವನ್ನು ಖಂಡಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದರೆ, ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬಹುದು. ಅವರ ಸಮಸ್ಯೆಯನ್ನು ಮಾನವೀಯ ಆಧಾರದ ಮೇಲೆ ಕಾಂಗ್ರೆಸ್ ಅರ್ಥಮಾಡಿಕೊಳ್ಳುತ್ತದೆ ಮತ್ತು ಪರಿಹರಿಸುತ್ತದೆ ಎಂಬ ವಿಶ್ವಾಸದಿಂದ ದೆಹಲಿಗೆ ಬಂದಿದ್ದೇವೆ. ನೀವು ನಮ್ಮನ್ನು ಭೇಟಿ ಮಾಡುವವರೆಗೂ ಕಾಯಲು ನಾವು ಸಿದ್ಧರಿದ್ದೇವೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.