ಅಗತ್ಯದ ಸಮಯದಲ್ಲಿ ಆಸ್ಪತ್ರೆಯವರು ಆ್ಯಂಬುಲೆನ್ಸ್ ಒದಗಿಸದ ಕಾರಣ, ವ್ಯಕ್ತಿಯೊಬ್ಬರು ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಹೋಗಿರುವ ಮನಕಲಕುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಜಾರ್ಖಂಡ್ನ ಜಮ್ಶೆಡ್ಪುರ ಜಿಲ್ಲೆಯ ಧಲ್ಭುಮ್ಗಢ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್ಸಿ) ಆ್ಯಂಬುಲೆನ್ಸ್ ಲಭ್ಯವಾಗದ ಕಾರಣ ಈ ಘಟನೆ ನಡೆದಿದೆ. ಧಲ್ಬುಮ್ಗಢದ ಸಮೀಪದ ಹಳ್ಳಿಯ ನಿವಾಸಿ, ಬುಡಕಟ್ಟು ಸಮುದಾಯದ ಶುಕುಲ್ಮಣಿ ಸಬರ್ ಎಂಬವರು ತಮ್ಮ ಪತ್ನಿಯನ್ನು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಅಲ್ಲಿನ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಜೆಮ್ಶೆಡ್ಪುರದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಆದರೆ, ಜೆಮ್ಶೆಡ್ಪುರಕ್ಕೆ ತೆರಳಲು 108 ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಇನ್ನಾವುದೇ ಪರ್ಯಾಯ ವ್ಯವಸ್ಥೆಗಳನ್ನು ಆರೋಗ್ಯ ಕೇಂದ್ರದವರು ಒದಗಿಸಿಗಿಲ್ಲ. ಪರಿಣಾಮವಾಗಿ, ಶುಕುಲ್ಮಣಿ ಅವರು ತನ್ನ ಪತ್ನಿಯನ್ನು ಭುಜದ ಮೇಲೆ ಹೊತ್ತುಕೊಂಡು ಮನೆಗೆ ಹೊರಟಿದ್ದಾರೆ.
ಘಟನೆಯ ಬಗ್ಗೆ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಶುಕುಲ್ಮಣಿ ಅವರ ಗ್ರಾಮಕ್ಕೆ ಆ್ಯಂಬುಲೆನ್ಸ್ ಕಳಿಸಲಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲು ಮುಂದಾಗಿದ್ದಾರೆ. ಆದರೆ, ದಂಪತಿಗಳು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
“ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಆ್ಯಂಬುಲೆನ್ಸ್ ವ್ಯವಸ್ಥೆ ಒದಗಿಸಿದ್ದೇವೆ. ಆದರೆ, ಅವರು ಆಸ್ಪತ್ರೆಗೆ ಹೋಗಲು ಹಿಂಜರಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದೆರ, ಅವರು ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ” ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸಿಎಚ್ಸಿ ಸಿಬ್ಬಂದಿಯಿಂದ ವಿವರಣೆ ಕೇಳಲಾಗಿದೆ ಎಂದು ಅವರು ಹೇಳಿದರು.