ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಗರವು 39 ವರ್ಷಗಳಲ್ಲಿಯೇ ಅತ್ಯಂತ ಭೀಕರ ಮಳೆ ಕಂಡಿದೆ. ಮಳೆ ಅಬ್ಬರಕ್ಕೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ರಾತ್ರಿಯಿಂದ ಬಿಟ್ಟೂಬಿಡೆ ಕೋಲ್ಕತ್ತಾದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ವಸತಿ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳು ನೀರಿನಲ್ಲಿ ಮುಳುಗಿವೆ. ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ನಿಂತ ನೀರಿನಲ್ಲಿ ವಿದ್ಯುತ್ ಪ್ರವಹಿಸಿ, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಹಲವಾರು ಭಾಗಗಳಲ್ಲಿ, ಜನರು ಮೊಣಕಾಲುವರೆಗಿನ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಕಳೆದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 251.4 ಮಿ.ಮೀ. ಮಳೆಯಾಗಿದೆ. 1986ರ ನಂತರ ಇದೇ ಮೊದಲ ಬಾರಿಗೆ ಕೋಲ್ಕತ್ತಾ ಭೀಕರ ಮಳೆ ಕಂಡಿದೆ. ಇದು, ಕಳೆದ 137 ವರ್ಷಗಳಲ್ಲಿಯೇ ಆರನೇ ಬೃಹತ್ ಮಳೆಯಾಗಿದೆ.
ಈ ಲೇಖನ ಓದಿದ್ದೀರಾ?: ಸೌಜನ್ಯ ಕೊಲೆಯ ಪ್ರಮುಖ ಸಾಕ್ಷಿಯಾಗುವರೇ ಚಿನ್ನಯ್ಯ? ವಿಡಿಯೋದಲ್ಲಿದೆ ಅಚ್ಚರಿಯ ಹೇಳಿಕೆ
ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ, ಹೆಚ್ಚು ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಕೆಲವು ದಿನಗಳ ಕಾಲ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಸೂಚನೆ ನೀಡಿದೆ.
ಮಳೆಯಿಂದಾಗಿ ರೈಲು ಸಂಚಾರವೂ ಕೂಡ ಸ್ಥಗಿತಗೊಂಡದೆ. ಪರಿಣಾಮ, ನೂರಾರು ಪ್ರಯಾಣಿಕರು ರೈಲು ನಿಲ್ದಾಣದಲ್ಲಿಯೇ ಕಾಯುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರು ಮನೆಯೊಳಗೆ ಕಾಲ ದೂಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪಶ್ಚಿಮ ಬಂಗಾಳದ ಅತ್ಯಂತ ಬೃಹತ್ ಮತ್ತು ಜನಪ್ರಿಯ ವಾರ್ಷಿಕ ಹಬ್ಬ ದುರ್ಗಾ ಪೂಜೆಗೆ ಕೋಲ್ಕತ್ತಾ ಸಿದ್ದವಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹು ಪೂಜೆಗಳನ್ನು ಈಗಾಗಲೇ ಉದ್ಘಾಟಿಸಿದ್ದು, ಹಬ್ಬಗಳು ಪ್ರಾರಂಭವಾಗಿವೆ. ಇದೇ ಸಮಯದಲ್ಲಿಯೇ ಮಳೆ ಆರ್ಭಟ ಹೆಚ್ಚಾಗಿದೆ. ದುರ್ಗಾ ಪೂಜೆಗಾಗಿ ಹತ್ತಾರು ಸಾವಿರ ಜನರು ಬರುವ ಪ್ರದೇಶಗಳು ಜಲಾವೃತಗೊಂಡಿವೆ. ಹಬ್ಬದ ಆಚರಣೆಗೂ ಅಡಚಣೆಯಾಗಿದೆ.