ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿ-ಯುವಜನರ ಮಲೆ ಮೋದಿ ಸರ್ಕಾರ ನಡೆಸಿದ ಪೊಲೀಸ್ ಲಾಠಿಚಾರ್ಜ್ ಮತ್ತು ದೌರ್ಜನ್ಯ ಖಂಡಿಸಿ ಭೀಮ್ ಆರ್ಮಿ ನಾಯಕ, ಸಂಸದ ಚಂದ್ರಶೇಖರ್ ಆಜಾದ್ ರಾವಣ್ ಸುರಿಯುವ ಮಳೆಯಲ್ಲೇ ಸತ್ಯಾಗ್ರಹ ನಡೆಸಿದ್ದಾರೆ. ಸಂಸತ್ ಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಇಡೀ ರಾತ್ರಿ ಕುಳಿತು ಧರಣಿ ನಡೆಸಿದ್ದಾರೆ. ಅವರ ಧರಣಿ ಮಂಗಳವಾರವೂ ಮುಂದುವರೆದಿದೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ, ಪರೀಕ್ಷಾ ಅಕ್ರಮಗಳ ವಿರುದ್ಧ, ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿ-ಯುವಜನರು ಪ್ರತಿಭಟನೆ ನಡೆಸುತ್ತಿದ್ದರು. ಸೋಮವಾರ ಸಂಸತ್ ಅಧಿವೇಶನ ಆರಂಭವಾದ ಹಿನ್ನೆಲೆಯಲ್ಲಿ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ‘ಸಂಸತ್ ಚಲೋ’ ಮೆರವಣಿಗೆ ನಡೆಸಿದ್ದರು. ಈ ವೇಳೆ, ಪ್ರತಿಭಟನಾನಿರತ ವಿದ್ಯಾರ್ಥಿ ಯುವಜನರ ಮೇಲೆ ದೆಹಲಿ ಪೊಲೀಸರು ಅಮಾನವೀಯ ದೌರ್ಜನ್ಯ ಎಸಗಿದ್ದಾರೆ.
ವಿದ್ಯಾರ್ಥಿ ಹಾಗೂ ಯುವಜನರ ಮೇಲಿನ ಈ ಭೀಕರ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಚಂದ್ರಶೇಖರ್ ಆಜಾದ್ ಅವರು ಅಂಬೇಡ್ಕರ್ ಪ್ರತಿಮೆಯ ಅಡಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಸೋಮವಾರ ರಾತ್ರಿ ದೆಹಲಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯ ನಡುವೆಯೂ ಆಜಾದ್ ಅವರು ಛತ್ರಿ ಹಿಡಿದುಕೊಂಡು ಧರಣಿ ನಡೆಸಿದ ಆಜಾದ್, ತಮ್ಮ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಸತ್ಯಾಗ್ರಹದ ವೇಳೆ ಮಾತನಾಡಿದ ಚಂದ್ರಶೇಖರ್ ಆಜಾದ್, “ಜಂತರ್ ಮಂತರ್‌ನಲ್ಲಿ ಯುವಕ- ಯುವತಿಯರ ಮೇಲೆ ಪೊಲೀಸರು ನಡೆಸಿದ ಕ್ರೌರ್ಯವನ್ನು ಕಂಡು ಮನಸ್ಸಿಗೆ ತೀವ್ರ ಆಘಾತವಾಗಿದೆ. ನಾವು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೋಡಿಲ್ಲವಾದರೂ, ಸೋಮವಾರ ನಡೆದ ಘಟನೆಯು ಆ ಕಪ್ಪು ಅಧ್ಯಾಯವನ್ನು ನೆನಪಿಸುವಂತಿತ್ತು” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಅಧಿಕಾರವಿದೆ. ಅದನ್ನು ಬಲಪ್ರಯೋಗದ ಮೂಲಕ ಹತೋಟಿ ಮಾಡಲು ಯತ್ನಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯಾಗಿದೆ” ಎಂದು ಅವರು ಹೇಳಿದ್ದಾರೆ.
“ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೆ ತಮ್ಮ ಈ ಶಾಂತಿಯುತ ಹೋರಾಟ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.




