ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ 2023ರ ಆಗಸ್ಟ್ 31 ರವರೆಗೆ ಒಟ್ಟು 685 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಭಾಗೀಯ ಆಯುಕ್ತರ ಅಧಿಕೃತ ವರದಿಯು ತಿಳಿಸಿದೆ.
ವಿಶೇಷ ಏನೆಂದರೆ, ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಅವರ ತವರು ಜಿಲ್ಲೆ ಬೀಡ್‌ನಲ್ಲಿ ಅತಿ ಹೆಚ್ಚು, ಅಂದರೆ 186 ಮಂದಿ, ರೈತರು ಸಾವನ್ನಪ್ಪಿದ್ದಾರೆ.
ಇಲ್ಲಿನ ವಿಭಾಗೀಯ ಆಯುಕ್ತರ ಕಚೇರಿಯ ವರದಿಯ ಪ್ರಕಾರ, ಈ ಪ್ರದೇಶದಲ್ಲಿ 2023 ರ ಜನವರಿ 1 ರಿಂದ ಆಗಸ್ಟ್ 31 ರ ನಡುವೆ 685 ಸಾಗುವಳಿದಾರರು ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಮತ್ತು ಈ ಪೈಕಿ 294 ಸಾವುಗಳು ಜೂನ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಸಂಭವಿಸಿವೆ.
ಅತಿ ಹೆಚ್ಚು ರೈತರ ಆತ್ಮಹತ್ಯೆಗಳು, ಅಂದರೆ 186 ಮಂದಿ, ಬೀಡ್ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬೀಡ್ ಬಂಡಾಯ ಎನ್‌ಸಿಪಿ ನಾಯಕ ಮುಂಡೆ ಅವರ ತವರು ಜಿಲ್ಲೆ. ಅವರು ಜುಲೈ 2 ರಂದು ಕ್ಯಾಬಿನೆಟ್ ಸಚಿವರಾಗಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿದರು. ನಂತರ ಅವರಿಗೆ ಕೃಷಿ ಖಾತೆಯನ್ನು ನೀಡಲಾಯಿತು.
ಮಧ್ಯ ಮಹಾರಾಷ್ಟ್ರದ ಬಯಲು ಸೀಮೆಯು, ಔರಂಗಾಬಾದ್, ಜಲ್ನಾ, ಬೀಡ್, ಪರ್ಭಾನಿ, ನಾಂದೇಡ್, ಒಸ್ಮಾನಾಬಾದ್, ಹಿಂಗೋಲಿ ಮತ್ತು ಲಾತೂರ್ ಹೀಗೆ.ಎಂಟು ಜಿಲ್ಲೆಗಳನ್ನು ಒಳಗೊಂಡಿದೆ.
ಬೀಡ್ ಜಿಲ್ಲೆಯ ನಂತರ ಉಸ್ಮಾನಾಬಾದ್‌ನಲ್ಲಿ 113 ರೈತರು, ನಾಂದೇಡ್‌ನಲ್ಲಿ 110 ರೈತರು, ಔರಂಗಾಬಾದ್‌ನಲ್ಲಿ 95 ರೈತರು, ಪರ್ಭಾನಿಯಲ್ಲಿ 58 ರೈತರು, ಲಾತೂರ್‌ನಲ್ಲಿ 51 ರೈತರು, ಜಲ್ನಾದಲ್ಲಿ 50 ರೈತರು ಮತ್ತು ಹಿಂಗೋಲಿಯಲ್ಲಿ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.