‘ಸ್ವಯಂ ಘೋಷಿತ ಬಾಬಾ’ ಒಬ್ಬ ಆಧ್ಯಾತ್ಮಿಕ ಚಿಕಿತ್ಸೆ ನೀಡುವ ನೆಪದಲ್ಲಿ ಗ್ರಾಮಸ್ಥರನ್ನು ಕ್ರೂರವಾಗಿ ಥಳಿಸಿ, ಆತನ ಮೂತ್ರ ಕುಡಿಸುತ್ತಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸಂಜಯ್ ಪಗಾರೆ ಎಂಬ ಈ ಸ್ವಯಂ ಘೋಷಿತ ಬಾಬಾ ಸುಮಾರು ಎರಡು ವರ್ಷಗಳಿಂದ ವೈಜಾಪುರ ತಹಸಿಲ್‌ನ ಶಿಯೂರ್ ಗ್ರಾಮದ ದೇವಸ್ಥಾನದಲ್ಲಿ ಈ ಮೌಢ್ಯ ಮತ್ತು ಹಿಂಸೆಯನ್ನು ನಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಜನ ಮರುಳೋ ಜಾತ್ರೆ ಮರುಳೋ; ಸ್ವಯಂಘೋಷಿತ ದೇವಮಾನವನ ಪಾದ ಮುಟ್ಟಲು ಪ್ರಾಣತೆತ್ತ ಜನರು
ಸಂಜಯ್ ಪಗಾರೆ ತನಗೆ ಅಲೌಕಿಕ ಶಕ್ತಿಗಳಿವೆ ಎಂದು ಹೇಳಿಕೊಂಡಿದ್ದಾನೆ. ತಾನು ಆತ್ಮಗಳನ್ನು ಓಡಿಸಬಲ್ಲೆ, ಅವಿವಾಹಿತರಿಗೆ ಮದುವೆ ಮಾಡಿಸಬಲ್ಲೆ, ಅಘೋರಿ ಆಚರಣೆಗಳ ಮೂಲಕ ದಂಪತಿಗಳು ಮಕ್ಕಳನ್ನು ಪಡೆಯಲು ಸಹಾಯ ಮಾಡಬಲ್ಲೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದಾನೆ ಎನ್ನಲಾಗಿದೆ.
ಪುರುಷರು ಮತ್ತು ಮಹಿಳೆಯರು- ಎಲ್ಲರಿಗೂ ಕೋಲುಗಳಿಂದ ಹೊಡೆಯುತ್ತಿದ್ದ ಈತ, ತನ್ನ ಬೂಟುಗಳನ್ನು ತನ್ನ ಅನುಯಾಯಿಗಳ ಬಾಯಿಗೆ ತುರುಕುತ್ತಿದ್ದ. ದೇವಾಲಯದ ಸುತ್ತಲೂ ವೃತ್ತಾಕಾರದಲ್ಲಿ ಓಡಲು ಹೇಳುತ್ತಿದ್ದ. ಚಿಕಿತ್ಸೆಯೆಂದು ಹೇಳಿ ಯಾವುದೋ ಮರದ ಎಲೆಗಳನ್ನು ತಿನ್ನಿಸುತ್ತಿದ್ದ. ತನ್ನ ಮೂತ್ರವನ್ನು ಕುಡಿಸುತ್ತಿದ್ದ, ಇದು ಆಧ್ಮಾತ್ಮಿಕ ಚಿಕಿತ್ಸೆಯ ಭಾಗ ಎಂದು ಹೇಳಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ‘ಹಾಥರಸ್ ಕಾಲ್ತುಳಿತ ಆಕಸ್ಮಿಕವಲ್ಲ ಪಿತೂರಿ’ ಎಂದ ಭೋಲೆ ಬಾಬಾ ಪರ ವಕೀಲ!
ಮೌಢ್ಯ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾಗಳನ್ನು ಬಳಸಿ ಈತನ ಈ ಕ್ರೂರ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಒಂದು ವೀಡಿಯೊದಲ್ಲಿ, ಬಾಬಾ ನೆಲದ ಮೇಲೆ ಮಲಗಿರುವ ವ್ಯಕ್ತಿಯ ಮುಖದ ಮೇಲೆ ನಡೆದಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸದ್ಯ ಮೌಢ್ಯ ವಿರೋಧಿ ಸಂಘಟನೆಯ ಕಾರ್ಯಕರ್ತರ ದೂರಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ. ವಂಚನೆ, ಹಲ್ಲೆ ಮತ್ತು ಮೌಢ್ಯ ಪ್ರಚಾರಕ್ಕಾಗಿ ಸಂಜಯ್ ಪಗಾರೆ ವಿರುದ್ಧ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.
