ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ವರ್ಗಾವಣೆ ಮಾಡುವಂತೆ ಕೇಂದ್ರ ಸರ್ಕಾರವು ಕೊಲಿಜಿಯಂ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿತ್ತು. ಆದಾಗ್ಯೂ, ಮುರುಳೀಧರ್ ಅವರ ವರ್ಗಾವಣೆಯನ್ನು ಹಲವಾರು ನ್ಯಾಯಾಧೀಶರು ವಿರೋಧಿಸಿದ್ದರು. ವಿರೋಧಿಸಿದ್ದ ಪ್ರಮುಖ ನ್ಯಾಯಾಧೀಶರು ನಿವೃತ್ತರಾಗುವವರೆಗೂ ಅದು ಸಾಧ್ಯವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಆರೋಪಿಸಿದ್ದಾರೆ.
“ನಾನು ಸುಪ್ರೀಂ ಕೋರ್ಟ್‌ನಲ್ಲಿದ್ದಾಗ ನ್ಯಾ. ಎಸ್ ಮುರಳೀಧರ್ ಅವರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿತ್ತು. ಆದರೆ, ನಾನು ವಿರೋಧಿಸಿದ್ದರಿಂದ ಅದು ಕಾರ್ಯಸಾಧ್ಯ ಆಗಲಿಲ್ಲ ಎಂದು ನ್ಯಾ. ಮರಳೀಧರ್ ಸಂಗ್ರಹದ ಇತ್ತೀಚೆಗೆ ಪ್ರಕಟಗೊಂಡ “[ಇನ್]ಕಂಪ್ಲೀಟ್ ಜಸ್ಟೀಸ್? ಸುಪ್ರೀಂ ಕೋರ್ಟ್ ಅಟ್ 75” ಎಂಬ ಪುಸ್ತಕದಲ್ಲಿ ಬರೆದ ಪ್ರಬಂಧದಲ್ಲಿ ನ್ಯಾ.ಲೋಕೂರ್ ನೆನಪಿಸಿಕೊಂಡಿದ್ದಾರೆ ಎಂದು livelaw.in ವರದಿ ಮಾಡಿದೆ.
“ಡಿಸೆಂಬರ್ 2018ರಲ್ಲಿ ತಾನು ನಿವೃತ್ತಿ ಹೊಂದಿದ ನಂತರ ಮುರಳೀಧರ್ ಅವರ ವರ್ಗಾವಣೆ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿತ್ತು. ಆ ಕೊಲಿಜಿಯಂನಲ್ಲಿದ್ದ ನ್ಯಾ. ಎ.ಕೆ ಸಿಕ್ರಿ ಅವರು ಅದನ್ನು ವಿರೋಧಿಸಿದ್ದರು. ನ್ಯಾ. ಸಿಕ್ರಿ ಮಾರ್ಚ್ 2019ರಲ್ಲಿ ನಿವೃತ್ತರಾದ ನಂತರ, ಮುರಳೀಧರ್ ಅವರ ವರ್ಗಾವಣೆ ವಿಷಯ ಮತ್ತೆ ಚರ್ಚೆಗೆ ಬಂತು. ಅಂತಿಮವಾಗಿ, ಫೆಬ್ರವರಿ 2020ರಲ್ಲಿ ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ‘ನಿರಂಕುಶವಾಗಿ’ ವರ್ಗಾಯಿಸಲಾಯಿತು ಎಂದು ನ್ಯಾಯಮೂರ್ತಿ ಲೋಕೂರ್ ತಮ್ಮ ಪ್ರಬಂಧದಲ್ಲಿ ಬರೆದಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
“ಸುಪ್ರೀಂ ಕೋರ್ಟ್ ಕೊಲಿಜಿಯಂನ ಕಾರ್ಯನಿರ್ವಹಣೆಯ ಪಾರದರ್ಶಕತೆಯ ಬಗ್ಗೆ ಹೇಳಲೇಬೇಕಾದ ವಿಷಯವಿದೆ. ಒಂದು ಸಂದರ್ಭದಲ್ಲಿ, ಕಾರ್ಯಾಂಗವು ಸಿಜೆಐ ಅವರಿಗೆ ವರ್ಗಾವಣೆ ಮಾಡಲು ಸಲಹೆ ನೀಡಿದೆ ಎಂಬ ಸ್ಪಷ್ಟವಾದ ಅನಿಸಿಕೆ ನನಗೆ ಬಂತು. ಅದು ನ್ಯಾ. ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ವರ್ಗಾವಣೆ ಮಾಡಿದ ವಿಷಯದಲ್ಲಿ. ಏನೋ ಒಂದು ವಿಷಯ ಖಂಡಿತವಾಗಿಯೂ ವರ್ಗಾವಣೆಗೆ ಆಧಾರವಾಗುವುದಿಲ್ಲ. ಹಾಗಾಗಿ, ನಾನು ವರ್ಗಾವಣೆ ಪ್ರಸ್ತಾವನೆಗೆ ನನ್ನ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದೆ. ಸಿಜೆಐ ನನ್ನ ಅಭಿಪ್ರಾಯವನ್ನು ಸುಲಭವಾಗಿ ಒಪ್ಪಿಕೊಂಡಿದ್ದರು. ನಾನು ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿಯಾದ ನಂತರ, ವರ್ಗಾವಣೆ ವಿಷಯ ಮತ್ತೆ ಮುನ್ನಲೆಗೆ ಬಂದಿತ್ತು. ಆದರೆ, ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಹೊಸದಾಗಿ ಸೇರ್ಪಡೆಯಾದ ನ್ಯಾ. ಸಿಕ್ರಿ ಕೂಡ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಅವರು ಕೂಡ ಪ್ರಸ್ತಾವಿತ ವರ್ಗಾವಣೆಯನ್ನು ವಿರೋಧಿಸಿದ್ದರು. ಸಿಕ್ರಿ ಅವರ ನಿವೃತ್ತಿಯ ನಂತರ, ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ನಿರಂಕುಶವಾಗಿ ವರ್ಗಾಯಿಸಲಾಯಿತು” ಎಂದು ಲೋಕೂರ್ ಬರೆದಿದುಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?
ಸ್ವತಂತ್ರ ಮತ್ತು ತೀಕ್ಷ್ಣ ತೀರ್ಪುಗಳಿಗೆ ಹೆಸರುವಾಸಿಯಾಗಿದ್ದ ನ್ಯಾಯಮೂರ್ತಿ ಮುರಳೀಧರ್ ಅವರನ್ನು ಅಂತಿಮವಾಗಿ ಫೆಬ್ರವರಿ 2020ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ನಿರ್ಧಾರವು ಆ ಸಮಯದಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಏಕೆಂದರೆ, 2020ರ ದೆಹಲಿ ಗಲಭೆಯ ಸಮಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊತ್ತಿರುವ ರಾಜಕಾರಣಿಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲು ವಿಫಲವಾದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳ ನಂತರ ಮುರಳೀಧರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು ಎಂದು livelaw.in ವಿವರಿಸಿದೆ.
ದೆಹಲಿ ಗಲಭೆ ವಿಷಯದಲ್ಲಿ ನ್ಯಾಯಮೂರ್ತಿ ಮುರಳೀಧರ್ ಅವರು ನೀಡಿದ್ದ ದಿಟ್ಟ ಆದೇಶಗಳಿಂದಾಗಿ ಅವರು ಪರಿಣಾಮಗಳನ್ನು ಎದುರಿಸಿರಬಹುದು ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಓಕಾ ಇತ್ತೀಚಿಗೆ ಹೇಳಿದ್ದರು ಎಂದು ವರದಿ ಹೇಳಿದೆ.