ನೇಪಾಳದ ಪದಚ್ಯುತ ಪ್ರಧಾನಿ ಮತ್ತು ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ ಓಲಿ ಶರ್ಮಾ ಅವರು ‘ಜನ್ ಝಡ್’ ಪ್ರತಿಭಟನೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಹಿಂಸಾಚಾರದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಅವರು, ಶಾಂತಿಗಾಗಿ ಯುವಜನರಲ್ಲಿ ಮನವಿ ಮಾಡಿದ್ದಾರೆ.
ಮಿಲಿಟರಿ ರಕ್ಷಣೆಯಲ್ಲಿ ಶಿವಪುರಿಯಲ್ಲಿರುವುದಾಗಿ ಹೇಳಿಕೊಂಡಿರುವ ಓಲಿ, “ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಯುವಜನರಿಗೆ ಭಾವಪೂರ್ಣ ಗೌರವ ಸಲ್ಲಿಸುತ್ತೇನೆ” ಎಂದಿದ್ದಾರೆ. ಅಲ್ಲದೆ, ತಮಗೆ ಸ್ವಂತ ಮಕ್ಕಳಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನು, ಭಾವನಾತ್ಮಕ ಕಾರ್ಡ್ ಬಳಕೆ (ಎಮೋಷನಲ್ ಕಾರ್ಡ್ ಪ್ಲೇ) ಎಂದು ನೇಪಾಳಿಗರು ಕರೆದಿದ್‌ದಾರೆ.
ಲಿಖಿತ ಸಂದೇಶ ನೀಡಿರುವ ಓಲಿ, “ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕೆಲವು ಶಕ್ತಿಗಳು ಕೆಲಸ ಮಾಡಿದೆ. ಆ ಶಕ್ತಿಗಳು ಯುವ ಪ್ರತಿಭಟನಾಕಾರರನ್ನು ವಿನಾಶಕಾರಿ ಹಿಂಸಾಚಾರದಲ್ಲಿ ತೊಡಗುವಂತೆ ಪ್ರೇರೇಪಿಸಿವೆ. ಪ್ರಮುಖ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಯುವಜನರ ಮುಗ್ಧ ಮುಖಗಳನ್ನು ವಂಚನೆಯ ರಾಜಕೀಯಕ್ಕಾಗಿ ಬಳಸಲಾಗುತ್ತಿದೆ” ಎಂದು ಅವರು ಬರೆದಿದ್ದಾರೆ.
ಈ ಲೇಖನ ಓದಿದ್ದೀರಾ?: ನೆರೆಯ ರಾಷ್ಟ್ರಗಳ ಅರಾಜಕತೆಯಿಂದ ಪಾಠ ಕಲಿತು, ಸರಿ ದಾರಿಗೆ ಬರುವುದೇ ಭಾರತ?
“ಬದಲಾವಣೆಗಾಗಿ ನಡೆದ ಹೋರಾಟದ ಸಮಯದಲ್ಲಿ ದೇಶವು ಎದುರಿಸಿದ ಕಷ್ಟಗಳಿಂದಾಗಿ, ನನಗೆ ಮಕ್ಕಳನ್ನು ಹೊಂದಲು ಸಾಧ್ಯವಾಗಲಿಲ್ಲ. ಆದರೆ ತಂದೆಯಾಗುವ ಬಯಕೆ ಎಂದಿಗೂ ಸಾಯಲಿಲ್ಲ” ಎಂದು ಹೇಳಿಕೊಂಡಿದ್ದಾರೆ. ತಾವು 1994ರಲ್ಲಿ ಗೃಹ ಸಚಿವರಾಗಿದ್ದ ಸಮಯವನ್ನು ನೆನಪಿಸಿಕೊಂಡಿರುವ ಓಲಿ, ತಮ್ಮ ಆಡಳಿತದಲ್ಲಿ ಯಾವುದೇ ಗುಂಡುಗಳು ಹಾರಲಿಲ್ಲ. ಶಾಂತಿಗೆ ನಾನು ಎಂದಿಗೂ ಬದ್ದನಾಗಿದ್ದೇನೆ ಎಂದಿದ್ದಾರೆ.