ನೋಯ್ಡಾ ಪ್ರತಿಭಟನೆ | ಆಕೃತಿ NSA ಬಂಧನ ರದ್ದು; ಯೋಗಿ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ ಕಪಾಳಮೋಕ್ಷ!

Date:

ನೋಯ್ಡಾದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ಪದವೀಧರೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಸುಮಾರು ಐದು ತಿಂಗಳು ಬಂಧನದಲ್ಲಿಟ್ಟಿದ್ದ ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ಅಲಹಾಬಾದ್‌ ಹೈಕೋರ್ಟ್‌ ಛೀಮಾರಿ ಹಾಕಿದೆ. ಆಕೃತಿ ವಿರುದ್ಧದ NSA ಬಂಧನ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯ, ಆಕೆಯ ಬಂಧನಕ್ಕೆ ರಾಜ್ಯ ನೀಡಿದ ವಿವರಣೆಯನ್ನು ‘ರಾಜ್ಯದ ಕಟ್ಟುಕಥೆʼ (concocted story by the state) ಎಂದು ಕಟುವಾಗಿ ಟೀಕಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಅತುಲ್‌ ಶ್ರೀಧರನ್‌ ಮತ್ತು ಅಚಲ್‌ ಸಚ್‌ದೇವ್‌ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಆಕೃತಿಯನ್ನು ಬೇರೆ ಯಾವುದೇ ಪ್ರಕರಣದಲ್ಲಿ ಬಂಧನದಲ್ಲಿಡುವ ಅಗತ್ಯವಿಲ್ಲದಿದ್ದರೆ ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಿರುವ ಕೋರ್ಟ್‌, ಆಕೃತಿಗೆ ₹5 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಏನಿದು ಪ್ರಕರಣ?

2026ರ ಏಪ್ರಿಲ್‌ನಲ್ಲಿ ನೋಯ್ಡಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ವೇತನ ಹೆಚ್ಚಳ ಹಾಗೂ ಉತ್ತಮ ಕೆಲಸದ ಪರಿಸ್ಥಿತಿಗಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಬಳಿಕ ಹಿಂಸಾಚಾರ, ಕಲ್ಲುತೂರಾಟ, ಬೆಂಕಿ ಹಚ್ಚುವಿಕೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾದ ಘಟನೆಗಳು ನಡೆದಿದ್ದವು.

ಈ ಹಿಂಸಾಚಾರಕ್ಕೆ ಪ್ರತಿಭಟನಾಕಾರರನ್ನು ಪ್ರಚೋದಿಸುವಲ್ಲಿ ಆಕೃತಿ ಚೌಧರಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಪೊಲೀಸರ ಆರೋಪ. ಆದರೆ ಆಕೃತಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ತಾವು ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ಮಾತ್ರ, ಪ್ರತಿಭಟನೆಯ ಸಂಘಟಕಿಯಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಆಕೃತಿ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಅವುಗಳಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಗೆ ಹಾನಿ, ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ಗಂಭೀರ ಆರೋಪಗಳನ್ನು ಪೊಲೀಸರು ದಾಖಲಿಸಿದ್ದರು. ಬಳಿಕ ಉತ್ತರ ಪ್ರದೇಶ ಪೊಲೀಸರು ಆಕೃತಿ ವಿರುದ್ಧ NSA ಅಡಿ ಕೇಸ್‌ ಹಾಕಿ ಬಂಧಿಸಿದ್ದರು. ಆಕೃತಿ ವಿರುದ್ಧ NSA ಹೇರಲು ರಾಜ್ಯ ಸರ್ಕಾರ ಆಧರಿಸಿರುವ ಸಾಕ್ಷ್ಯಗಳ ಬಗ್ಗೆ ಹೈಕೋರ್ಟ್‌ ಆರಂಭದಿಂದಲೇ ಗಂಭೀರ ಪ್ರಶ್ನೆಗಳನ್ನು ಎತ್ತಿತು. ಆಕೆ ಪ್ರತಿಭಟನಾಕಾರರಿಗೆ ಕಲ್ಲುತೂರಾಟ ಅಥವಾ ವಾಹನಗಳಿಗೆ ಬೆಂಕಿ ಹಚ್ಚುವಂತೆ ಕರೆ ನೀಡಿದ್ದಾಳೆ ಎಂಬುದನ್ನು ತೋರಿಸುವ ವಿಡಿಯೊ, ಸಂದೇಶ ಅಥವಾ ಇತರ ದೃಢ ಸಾಕ್ಷ್ಯ ಎಲ್ಲಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.

ರಾಜ್ಯ ಸರ್ಕಾರ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿತು. ಆದರೆ ಆ ಹೇಳಿಕೆಗಳನ್ನು ಬೆಂಬಲಿಸುವ ವಿಡಿಯೊ ಸಾಕ್ಷ್ಯವನ್ನು ನ್ಯಾಯಾಲಯ ಕೇಳಿತು. ಸರ್ಕಾರದ ಪರ ವಕೀಲರು ವಿಡಿಯೊ ಇದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಲಾಯಿತು. ಆದರೆ ಆರೋಪಕ್ಕೆ ಸಂಬಂಧಿಸಿದ ದೃಢ ವಿಡಿಯೊ ಸಾಕ್ಷ್ಯವನ್ನು ರಾಜ್ಯ ಸಮರ್ಪಕವಾಗಿ ಹಾಜರುಪಡಿಸಲು ವಿಫಲವಾಯಿತು ಎಂದು ವರದಿಗಳು ತಿಳಿಸಿವೆ.

ಆಕೃತಿಯನ್ನು ಏಪ್ರಿಲ್‌ 12ರಂದು ಬೆಳಗ್ಗೆ 10.56ಕ್ಕೆ ಬಂಧಿಸಲಾಗಿತ್ತು ಎಂದು ರಾಜ್ಯ ಸರ್ಕಾರ ತಿಳಿಸಿತು. ಅದೇ ವೇಳೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿ ಅಗತ್ಯ ನೋಟಿಸ್‌ ನೀಡಲಾಗಿದೆ ಎಂದು ಸರ್ಕಾರ ವಾದಿಸಿತು. ಆದರೆ, ಸೆಕ್ಷನ್‌ 130ರ ಅಡಿ ನೋಟಿಸ್‌ ನೀಡುವ ಮೊದಲು ಅಗತ್ಯವಿರುವ ಸೆಕ್ಷನ್‌ 126ರ ಪ್ರಕ್ರಿಯೆ ಪಾಲಿಸಲಾಗಿತ್ತೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಸೆಕ್ಷನ್‌ 126ರ ನೋಟಿಸ್‌ ನೀಡಿರಲಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿತು.

ಪೊಲೀಸರ ಜನರಲ್‌ ಡೈರಿ ದಾಖಲೆಯಲ್ಲಿರುವ ಸಮಯ ಹಾಗೂ ನೋಟಿಸ್‌ ಸಿದ್ಧಪಡಿಸಿದ ಸಮಯವನ್ನು ಹೋಲಿಸಿದ ಕೋರ್ಟ್‌, ಮೊದಲು ಆಕೃತಿಯನ್ನು ಬಂಧಿಸಿ, ಬಳಿಕ ನೋಟಿಸ್‌ ಸಿದ್ಧಪಡಿಸಲಾಗಿತ್ತೇ? ಎಂಬ ಗಂಭೀರ ಪ್ರಶ್ನೆ ಎತ್ತಿತು. ಈ ಪ್ರಕ್ರಿಯೆಯಲ್ಲಿನ ಅಸಂಗತತೆಗಳು ಕೂಡ ಬಂಧನದ ಕಾನೂನುಬದ್ಧತೆಯ ಮೇಲೆ ಅನುಮಾನ ಮೂಡಿಸಿದವು.

ಪ್ರಕರಣದ ಸಮಯಕ್ರಮವೂ ಕೋರ್ಟ್‌ನ ಗಮನ ಸೆಳೆಯಿತು. ಆಕೃತಿಯನ್ನು ಏಪ್ರಿಲ್‌ 12ರಂದು ಬಂಧಿಸಲಾಗಿತ್ತು. ಆದರೆ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಮುಖ ಹಿಂಸಾಚಾರದ ಘಟನೆ ಏಪ್ರಿಲ್‌ 13ರಂದು ನಡೆದಿತ್ತು ಎಂದು ವರದಿಯಾಗಿದೆ. ಹೀಗಾಗಿ, ಆಕೃತಿ ಬಂಧನದಲ್ಲಿದ್ದ ನಂತರ ನಡೆದ ಹಿಂಸಾಚಾರಕ್ಕೆ ಆಕೆಯನ್ನೇ ಹೊಣೆ ಮಾಡುವ ರಾಜ್ಯದ ವಾದದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಆಕೃತಿ ವಿರುದ್ಧದ ಆರೋಪಗಳನ್ನು ಸಮರ್ಥಿಸುವ ವಿಡಿಯೊ ಸೇರಿದಂತೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಲು ರಾಜ್ಯ ಸರ್ಕಾರ ಹೆಚ್ಚಿನ ಸಮಯ ಕೇಳಿತ್ತು. ಆದರೆ, ಆಕೃತಿ ಈಗಾಗಲೇ ಸುಮಾರು ಐದು ತಿಂಗಳಿನಿಂದ ಬಂಧನದಲ್ಲಿದ್ದಾರೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಮತ್ತಷ್ಟು ವಿಳಂಬಕ್ಕೆ ಅವಕಾಶ ನೀಡಿಲ್ಲ. ಆರೋಪಕ್ಕೆ ಆಧಾರವಾಗಿರುವ ವಸ್ತುಗಳನ್ನು ಸಮರ್ಪಕವಾಗಿ ತೋರಿಸಲು ರಾಜ್ಯ ವಿಫಲವಾದ ಹಿನ್ನೆಲೆಯಲ್ಲಿ NSA ಬಂಧನವನ್ನು ರದ್ದುಪಡಿಸಿ ಆದೇಶಿಸಿದೆ. ಜತೆಗೆ ಆಕೃತಿಗೆ ₹5 ಲಕ್ಷ ಪರಿಹಾರ ನೀಡುವಂತೆ ನೋಯ್ಡಾ ಆಡಳಿತಕ್ಕೆ ಆದೇಶಿಸಿದೆ. ಈ ಮೊತ್ತವನ್ನು ಪ್ರಕರಣದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವೇತನದಿಂದ ವಸೂಲಿ ಮಾಡುವಂತೆ ಕೋರ್ಟ್‌ ಸೂಚಿಸಿದೆ. NSA ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಪೊಲೀಸ್‌ ಮಟ್ಟದಿಂದ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ಪಾತ್ರವಿತ್ತು ಎಂದು ವಕೀಲರು ಹೇಳಿದ್ದಾರೆ. NSA ಬಂಧನ ರದ್ದಾದರೂ ಆಕೃತಿ ವಿರುದ್ಧ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಹಲವು ಕ್ರಿಮಿನಲ್‌ ಪ್ರಕರಣಗಳು ಇನ್ನೂ ಬಾಕಿಯಿವೆ. ವರದಿಗಳ ಪ್ರಕಾರ, 11 ಪ್ರಕರಣಗಳ ಪೈಕಿ ಐದರಲ್ಲಿ ಅವರು ಜಾಮೀನು ಪಡೆದಿದ್ದಾರೆ. ಉಳಿದ ಪ್ರಕರಣಗಳಲ್ಲಿ ಜಾಮೀನು ಪ್ರಕ್ರಿಯೆ ಬಾಕಿಯಿರುವುದರಿಂದ NSA ರದ್ದುಪಡಿಸಿದ ತಕ್ಷಣವೇ ಅವರು ಜೈಲಿನಿಂದ ಹೊರಬರುವ ಸ್ಥಿತಿ ಇಲ್ಲ.

NSA ಎಂದರೇನು? ಯಾಕೆ ಇದು ಕರಾಳ ಕಾಯ್ದೆ?

ರಾಷ್ಟ್ರೀಯ ಭದ್ರತಾ ಕಾಯ್ದೆ (NSA), 1980 ಸಾಮಾನ್ಯ ಕ್ರಿಮಿನಲ್‌ ಕಾನೂನಿಗಿಂತ ಭಿನ್ನವಾದ ಕಠಿಣ ಕಾನೂನು. ವ್ಯಕ್ತಿಯೊಬ್ಬರು ಭವಿಷ್ಯದಲ್ಲಿ ದೇಶದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟುಮಾಡಬಹುದು ಎಂದು ಸರ್ಕಾರ ಭಾವಿಸಿದರೆ, ಅಪರಾಧ ಸಾಬೀತಾಗುವ ಮೊದಲೇ ತಡೆಗಟ್ಟುವ ಬಂಧನಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ. ಅಂದರೆ, ಸಾಮಾನ್ಯ ಅಪರಾಧ ಪ್ರಕರಣದಲ್ಲಿ ‘ಅಪರಾಧ ನಡೆದಿದೆಯೇ, ಆರೋಪಿ ಮಾಡಿದ್ದಾನೆಯೇ?’ ಎಂಬುದನ್ನು ತನಿಖೆ ಹಾಗೂ ವಿಚಾರಣೆಯ ಮೂಲಕ ನಿರ್ಧರಿಸಲಾಗುತ್ತದೆ. ಆದರೆ NSAಯಲ್ಲಿ ‘ಈ ವ್ಯಕ್ತಿಯಿಂದ ಮುಂದೆ ಅಪಾಯ ಉಂಟಾಗುವ ಸಾಧ್ಯತೆ ಇದೆಯೇ?’ ಎಂಬ ಕಾರಣವೂ ಬಂಧನಕ್ಕೆ ಆಧಾರವಾಗಬಹುದು. ಇದರಿಂದ NSAಯಂತಹ ತಡೆಗಟ್ಟುವ ಬಂಧನ ಕಾಯ್ದೆಯ ಬಳಕೆಯಲ್ಲಿ ಸಾಕ್ಷ್ಯ, ಸರಿಯಾದ ಕಾನೂನು ಪ್ರಕ್ರಿಯೆ ಮತ್ತು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ ಅತ್ಯಂತ ಮಹತ್ವ ಪಡೆಯುತ್ತವೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವ ಹಕ್ಕು ನಾಗರಿಕ ಸ್ವಾತಂತ್ರ್ಯದ ಭಾಗವಾಗಿದೆ. ಆದರೆ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟರೆ, ಹಿಂಸಾಚಾರಕ್ಕೆ ನೇರವಾಗಿ ಹೊಣೆಗಾರರಾದವರ ವಿರುದ್ಧ ಕ್ರಿಮಿನಲ್‌ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರನ್ನು ಅತ್ಯಂತ ಕಠಿಣವಾದ ತಡೆಗಟ್ಟುವ ಬಂಧನ ಕಾಯ್ದೆಯಡಿ ಬಂಧಿಸಲು, ಆ ವ್ಯಕ್ತಿಯ ನಿರ್ದಿಷ್ಟ ಪಾತ್ರವನ್ನು ಸ್ಪಷ್ಟವಾಗಿ ತೋರಿಸುವ ಸಾಕ್ಷ್ಯ ಮತ್ತು ಕಾನೂನುಬದ್ಧ ಪ್ರಕ್ರಿಯೆ ಅಗತ್ಯ ಎಂಬುದು ಈ ಪ್ರಕರಣದಿಂದ ಮುನ್ನೆಲೆಗೆ ಬಂದಿರುವ ಪ್ರಮುಖ ಪ್ರಶ್ನೆ.

ಆಕೃತಿ ಪ್ರಕರಣದಲ್ಲಿ ಹೈಕೋರ್ಟ್‌ ಆರೋಪದ ಸ್ವರೂಪಕ್ಕಿಂತಲೂ, ಆರೋಪವನ್ನು ಬೆಂಬಲಿಸುವ ಸಾಕ್ಷ್ಯ ಏನು ಮತ್ತು ಬಂಧನದ ಪ್ರಕ್ರಿಯೆ ಕಾನೂನುಬದ್ಧವಾಗಿತ್ತೇ? ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ವಿಶೇಷವಾಗಿ, ಬಂಧನದ ಕ್ರಮದಲ್ಲಿನ ಅಸಂಗತತೆ, ಆರೋಪಕ್ಕೆ ಆಧಾರವಾಗಿರುವ ಸಾಕ್ಷ್ಯದ ಕೊರತೆ ಮತ್ತು ರಾಜ್ಯದ ವಾದದ ಬಗ್ಗೆ ನ್ಯಾಯಾಲಯ ವ್ಯಕ್ತಪಡಿಸಿದ ತೀವ್ರ ಅಸಮಾಧಾನ ಗಮನಾರ್ಹವಾಗಿದೆ.

ಯೋಗಿ ಸರ್ಕಾರದಿಂದಾದ ಎಡವಟ್ಟು ಒಂದೆರಡಲ್ಲ..

ಯುಪಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್‌ ವಿರುದ್ಧ ಅಲಹಾಬಾದ್‌ ಹೈಕೋರ್ಟ್‌ ಕಠಿಣ ನಿಲುವು ತಳೆದಿತ್ತು. ಲಖನೌ ಮೂಲದ ಗಾಯತ್ರಿ ದೇವಿ ಎಂಬ ಮಹಿಳೆ, ತಾನು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ನ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಕ್ರಿಮಿನಲ್‌ breach of trust, cheating ಮತ್ತು criminal intimidation ಆರೋಪಗಳಿದ್ದವು. ಎಫ್‌ಐಆರ್‌ ದಾಖಲಾಗಿ ಸುಮಾರು ಒಂದು ವರ್ಷ ಕಳೆದರೂ ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂಬುದು ಅರ್ಜಿದಾರರ ಆರೋಪವಾಗಿತ್ತು. ಪೊಲೀಸರು ಹಿಂದೆ ಕೋರ್ಟ್‌ಗೆ ತನಿಖೆ ಮುಂದುವರಿಸುವುದಾಗಿ ಭರವಸೆ ನೀಡಿದ್ದರೂ, ನಂತರವೂ ಪ್ರಕರಣ ಬಹುತೇಕ ಅದೇ ಸ್ಥಿತಿಯಲ್ಲಿತ್ತು. ಪೊಲೀಸ್‌ ತನಿಖೆಯನ್ನು ಸುಧಾರಿಸಲು ಹೈಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಜಾರಿಗೊಳಿಸುವ ಬದಲು, ಅವುಗಳನ್ನು ಪ್ರಶ್ನಿಸಿ ಅನುಷ್ಠಾನವನ್ನು ತಡೆಯಲು ಆಡಳಿತಾತ್ಮಕ ಪ್ರಯತ್ನ ನಡೆದಿದೆ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ವಿನೋದ್ ದಿವಾಕರ್‌ ಅವರ ಪೀಠ, ಪ್ರಸಾದ್‌ ಅವರ ನಡೆ ಕೋರ್ಟ್‌ನ ಅಧಿಕಾರವನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನದಂತೆ ಕಾಣುತ್ತದೆ ಎಂದು ಹೇಳಿ, ಅವರ ನಡವಳಿಕೆಯನ್ನು DoPTಗೆ ಕಳುಹಿಸಿ ಭವಿಷ್ಯದ ಕೇಂದ್ರ ಸರ್ಕಾರದ ನಿಯೋಜನೆಗಳಲ್ಲಿ ಅವರ ಸೂಕ್ತತೆಯನ್ನು ಪರಿಗಣಿಸುವಂತೆ ಸೂಚಿಸಿತು.

ಗೋಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗ್ರಾಮ ಪ್ರಧಾನರೊಬ್ಬರನ್ನು ಸರ್ಕಾರ ಹುದ್ದೆಯಿಂದ ವಜಾಗೊಳಿಸಿತ್ತು. ಆದರೆ ಕೇವಲ ಆರೋಪವಿದೆ ಎಂಬ ಕಾರಣಕ್ಕೆ ಚುನಾಯಿತ ಪ್ರತಿನಿಧಿಯನ್ನು ಹುದ್ದೆಯಿಂದ ತೆಗೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿತು. ವಜಾ ಆದೇಶ ರದ್ದುಪಡಿಸಿ, ಅವರನ್ನು ಮರುಸ್ಥಾಪಿಸಲು ಆದೇಶಿಸಿತು.

ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣವನ್ನು ಮತಾಂತರದ ಆರೋಪಕ್ಕೆ ಜೋಡಿಸಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮಹಿಳೆ ವಾಪಸ್‌ ಬಂದ ಬಳಿಕ ಆರೋಪಗಳ ಆಧಾರವನ್ನು ಕೋರ್ಟ್‌ ಪ್ರಶ್ನಿಸಿತು. ಎಫ್‌ಐಆರ್‌ ರದ್ದುಪಡಿಸಿದ ಹೈಕೋರ್ಟ್‌, ಜೈಲಿನಲ್ಲಿದ್ದ ವ್ಯಕ್ತಿಗೆ ₹50 ಸಾವಿರ ಪರಿಹಾರ ನೀಡಲು ಆದೇಶಿಸಿತು. ಪ್ರಕರಣ ದಾಖಲಿಸುವಲ್ಲಿ ಅಧಿಕಾರಿಗಳು ‘ಬ್ರೌನಿ ಪಾಯಿಂಟ್ಸ್‌’ ಪಡೆಯಲು ಪೈಪೋಟಿ ನಡೆಸಿದಂತಿದೆ ಎಂದು ಕೋರ್ಟ್‌ ಟೀಕಿಸಿತ್ತು.

ಸಚಿವಾಲಯದ ನೌಕರರೊಬ್ಬರನ್ನು ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಡಿಸಿಎಂ ವಿರುದ್ಧದ ಆಕ್ಷೇಪಾರ್ಹ WhatsApp ಸಂದೇಶವನ್ನು ಫಾರ್ವರ್ಡ್‌ ಮಾಡಿದ ಆರೋಪದಲ್ಲಿ ವಜಾಗೊಳಿಸಲಾಗಿತ್ತು. ಸಂದೇಶವನ್ನು ಉದ್ದೇಶಪೂರ್ವಕವಾಗಿ ಹರಡಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿ ವಜಾ ಆದೇಶ ರದ್ದುಪಡಿಸಿತು.

ಇದನ್ನೂ ಓದಿ: ದೆಹಲಿ ಪ್ರತಿಭಟನೆ | ಪ್ರತಿಭಟನಾಕಾರರ ಮೇಲಿನ FIR ರದ್ದುಗೊಳಿಸಿದ ಸುಪ್ರೀಂ; 2,873 ಮಂದಿ ವಿರುದ್ಧ ತನಿಖೆಗೆ ಅನುಮತಿ

ನಿವೃತ್ತಿ ವಯಸ್ಸು ಮೀರಿಯೂ ಸೇವೆ ಮುಂದುವರಿಸಿದ ಶಿಕ್ಷಕರಿಗೆ ಗ್ರಾಚ್ಯುಟಿ ನಿರಾಕರಿಸಿದ್ದ ಯುಪಿ ಸರ್ಕಾರದ ಆದೇಶದ ಸಂಬಂಧಿತ ಭಾಗವನ್ನು ಹೈಕೋರ್ಟ್‌ ರದ್ದುಪಡಿಸಿತು. ಸರ್ಕಾರದ ಆದೇಶಕ್ಕಿಂತ ಕಾನೂನಿನ ನಿಯಮವೇ ಮೇಲು ಎಂದು ಕೋರ್ಟ್‌ ಸ್ಪಷ್ಟಪಡಿಸಿ, ಬಾಕಿ ಗ್ರಾಚ್ಯುಟಿಯನ್ನು 6% ಬಡ್ಡಿಯೊಂದಿಗೆ ಪಾವತಿಸಲು ಸೂಚಿಸಿತು.

ಲಖನೌನಲ್ಲಿ ಇ-ರಿಕ್ಷಾ ಪರವಾನಗಿ ಪಡೆಯಲು ನಗರದ ಶಾಶ್ವತ ನಿವಾಸಿಯಾಗಿರಬೇಕು ಎಂಬ ಸರ್ಕಾರದ ನಿರ್ಬಂಧವನ್ನು ಹೈಕೋರ್ಟ್‌ ರದ್ದುಪಡಿಸಿತು. ಇಂತಹ ನಿಯಮವು ಜೀವನೋಪಾಯಕ್ಕಾಗಿ ಬೇರೆ ಪ್ರದೇಶಗಳಿಂದ ಲಖನೌಗೆ ಬರುವವರ ಹಕ್ಕುಗಳಿಗೆ ಧಕ್ಕೆ ತರುತ್ತದೆ ಮತ್ತು “arbitrary” ಎಂದು ಕೋರ್ಟ್‌ ಹೇಳಿತು.

ಯೋಗಿ ಸರ್ಕಾರಕ್ಕೆ ಸಂಬಂಧಿಸಿದ ಇತರ ಪ್ರಕರಣಗಳಲ್ಲೂ ಹೈಕೋರ್ಟ್‌ ಆಡಳಿತಾತ್ಮಕ ನಿರ್ಧಾರ, ಪೊಲೀಸ್‌ ತನಿಖೆ, ಬಂಧನ ಹಾಗೂ ಸರ್ಕಾರಿ ಅಧಿಕಾರದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದು ಗಮನಾರ್ಹ. ಕಾನೂನು-ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ  ಕಾನೂನು ಪ್ರಕ್ರಿಯೆಯನ್ನೇ ಬದಿಗೊತ್ತಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರಕ್ಕೆ ಹೈಕೋರ್ಟ್‌ ಮನವರಿಕೆ ಮಾಡಿಕೊಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದ ಇಂಧನದಿಂದ ಭಾರತ ದೂರ ಸರಿಯುವುದು ಅಸಾಧ್ಯ: ಅಮೆರಿಕ

ರಷ್ಯಾದ ತೈಲ ಖರೀದಿಸುವ ರಾಷ್ಟ್ರಗಳ ಮೇಲಿನ ದಿಗ್ಬಂಧನ ಮತ್ತು ಆಮದು ಸುಂಕದ...

ಫುಟ್‌ಪಾತ್ ನಿರ್ಮಿಸದಿದ್ರೆ, ನಾವೇ ಧರಣಿ‌ ಕೂರ್ತೀವಿ; BJP ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್!

ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಮೀಪದ ಮಥುರಾ ರಸ್ತೆಯಲ್ಲಿ ಪಾದಚಾರಿಗಳು...

ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ನೀತಿ ಜಾರಿ: ಆದೇಶ ಪಾಲಿಸದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳಿಗೆ ಮೂಲಭೂತ ಋತುಚಕ್ರ ನೈರ್ಮಲ್ಯ ಸೌಲಭ್ಯಗಳು ಮತ್ತು ಉಚಿತ...