“ತನ್ನನ್ನು ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ ಆಕೆಯ ಮೇಲೆ ಪತಿಯು ತನ್ನ ಕುಟುಂಬದ ಸಂಪ್ರದಾಯಗಳನ್ನು ಹೇರಲು ಸಾಧ್ಯವಿಲ್ಲ. ಹೆಂಡತಿಯಾದವಳು ಅಂತಹ ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸಲು ನಿರಾಕರಿಸುವುದು ಕಾನೂನಿನ ದೃಷ್ಟಿಯಲ್ಲಿ ‘ಕ್ರೌರ್ಯ’ವೂ ಅಲ್ಲ” ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯು ತನ್ನ ಕುಟುಂಬದ ಸಾಂಪ್ರದಾಯಗಳನ್ನು ಮತ್ತು ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಪತಿಯೊಬ್ಬ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಪತ್ನಿಯಿಂದ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಬಟ್ಟು ದೇವಾನಂದ್ ಮತ್ತು ಸುನೀತಾ ಗಂಧಮ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ. ಆತನ ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ ನ್ಯಾಯಪೀಠ, “ಸಾಮಾನ್ಯವಾಗಿ ಪತ್ನಿಯಾದವಳು ಕುಟುಂಬದ ಹಳೆಯ ಅಥವಾ ಸಾಂಪ್ರದಾಯಿಕ ಪದ್ಧತಿಗಳನ್ನು ಪಾಲಿಸದಿರುವುದು ಕಾನೂನುಬದ್ಧವಾಗಿ ಕ್ರೂರತೆ ಎನಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಸ್ವಾತಂತ್ರ್ಯ, ಸರಿ-ತಪ್ಪುಗಳ ಆಯ್ಕೆ ಮತ್ತು ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚರಣೆಗಳಿಗೆ ಸಂಬಂಧಿಸಿದಂತೆ ತಂತಮ್ಮದೇ ಆದ ನಂಬಿಕೆಗಳಿರುತ್ತವೆ. ಇಂತಹ ಭಿನ್ನಾಭಿಪ್ರಾಯಗಳು ದಾಂಪತ್ಯ ಜೀವನದಲ್ಲಿ ಸಹಜ. ಇವು ಮದುವೆಯನ್ನು ರದ್ದುಗೊಳಿಸಲು ಅಗತ್ಯವಿರುವ ಮಾನಸಿಕ ಅಥವಾ ದೈಹಿಕ ಕ್ರೂರತೆಯ ವ್ಯಾಪ್ತಿಗೆ ಬರುವುದಿಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಪತಿಯ ಕುಟುಂಬದ ಆಚಾರದಂತೆ ಪತ್ನಿಯು ಒದ್ದೆ ಸೀರೆ ಉಟ್ಟು ‘ಮಡಿ’ ಆಚರಣೆಯನ್ನು ಪಾಲಿಸಲು ನಿರಾಕರಿಸಿದ್ದಳು ಎಂಬುದನ್ನು ಪತಿ ಪ್ರಮುಖವಾಗಿ ಉಲ್ಲೇಖಿಸಿದ್ದರು. ಇದನ್ನು ಗಮನಿಸಿದ ಹೈಕೋರ್ಟ್, “ಕೇವಲ ಸಾಂಪ್ರದಾಯಿಕ ವಿಧಿವಿಧಾನ ಅಥವಾ ಆಚರಣೆಯನ್ನು ಪಾಲಿಸದೇ ಇರುವುದು ಸಂಗಾತಿಗೆ ಹಾನಿ ಮಾಡುವ ಅಥವಾ ಕಿರುಕುಳ ನೀಡುವ ಉದ್ದೇಶಪೂರ್ವಕ ಕೃತ್ಯವಲ್ಲ. ಹೀಗಾಗಿ ಆಚರಣೆಯನ್ನು ನಿರಾಕರಿಸುವುದಷ್ಟೇ ಕ್ರೂರತೆಯಾಗುವುದಿಲ್ಲ” ಎಂದು ಹೇಳಿದೆ.
“ಒಂದು ವೇಳೆ, ಈ ನಿರಾಕರಣೆಯು ಸಾರ್ವಜನಿಕವಾಗಿ ಪತಿಗೆ ಅವಮಾನ ಮಾಡುವುದು, ನಿರಂತರವಾಗಿ ನಿಂದಿಸುವುದು ಅಥವಾ ಕುಟುಂಬದ ವಿರುದ್ಧ ದುರುದ್ದೇಶಪೂರಿತ ನಡವಳಿಕೆಯಾಗಿ ಬದಲಾದರೆ ಮಾತ್ರ ಅದನ್ನು ಕ್ರೂರತೆ ಎಂದು ಮೌಲ್ಯಮಾಪನ ಮಾಡಬಹುದು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅಂತಹ ಯಾವುದೇ ಅವಮಾನ ಅಥವಾ ನಿಂದನೆ ನಡೆದಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ,” ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಪ್ರಕರಣದ ವಿವರಗಳ ಪ್ರಕಾರ, 1999ರಲ್ಲಿ ಹಿಂದು ಧರ್ಮದ ಆಚರಣೆಗಳಂತೆ ಈ ದಂಪತಿಯ ವಿವಾಹ ನಡೆದಿತ್ತು. ಆದರೆ, ಪತಿಯು ತನ್ನ ಪತ್ನಿಯ ವಿರುದ್ಧ ಕ್ರೂರತೆ ಮತ್ತು ತನಗೆ ಮೋಸ ಮಾಡಿ ತೊರೆದು ಹೋಗಿದ್ದಾಳೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. “ಪತ್ನಿಯು ತನ್ನ ಕುಟುಂಬದ ಮಡಿ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸುತ್ತಿಲ್ಲ, ವಯಸ್ಸಾದ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗೂ ನಿರಂತರವಾಗಿ ಜಗಳವಾಡಿ 2000ರಲ್ಲಿ ತನ್ನನ್ನು ತೊರೆದು ಹೋಗಿದ್ದಾಳೆ” ಎಂದು ಆರೋಪಿಸಿದ್ದರು.
ಆದರೆ, ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಪತ್ನಿ, “ತಾನೂ ಸಹ ಸಾಂಪ್ರದಾಯಿಕ ಕುಟುಂಬದಿಂದಲೇ ಬಂದವಳಾಗಿದ್ದು, ಪತಿಯ ಅಣ್ಣ ಮತ್ತು ಅತ್ತಿಗೆಯ ಹಸ್ತಕ್ಷೇಪದಿಂದಾಗಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು” ಎಂದು ತಿಳಿಸಿದ್ದರು. ವಿಚಾರಣೆ ನಡೆಸಿದ್ದ ಕುಟುಂಬ ನ್ಯಾಯಾಲಯವು 2006ರಲ್ಲೇ ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ದಂಪತಿ 2000ದಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪ್ರಸ್ತುತ ಪತಿಗೆ 76 ವರ್ಷ ಹಾಗೂ ಪತ್ನಿಗೆ 66 ವರ್ಷ ವಯಸ್ಸಾಗಿದೆ. ಹಲವು ವರ್ಷಗಳ ದಾಂಪತ್ಯದಲ್ಲಿ ನಡೆದ ಒಂದೆರಡು ಪ್ರತ್ಯೇಕ ಘಟನೆಗಳನ್ನು ಇಟ್ಟುಕೊಂಡು ‘ಕ್ರೂರತೆ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪತಿಯ ಮೇಲ್ಮನವಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.




