ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ತಡರಾತ್ರಿ NEET-UG 2026 ರ ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ಇದರಲ್ಲಿ, ಒಟ್ಟು 11.21 ಲಕ್ಷ ವಿದ್ಯಾರ್ಥಿಗಳು ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ವಿಶೇಷವೆಂದರೆ, ತೇರ್ಗಡೆಯಾದ ಒಟ್ಟು ಯಶಸ್ವಿ ಅಭ್ಯರ್ಥಿಗಳ ಪೈಕಿ ಶೇಕಡಾ 58 ಕ್ಕಿಂತ ಹೆಚ್ಚಿನವರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ ಎಂಬುದು ಗಮನಾರ್ಹ ಅಂಶವಾಗಿದೆ.
ಪಂಜಾಬ್ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪಾನ್ಶುಲ್ ಬನ್ಸಾಲ್ ಅವರು 720 ಕ್ಕೆ 715 ಅಂಕಗಳನ್ನು ಗಳಿಸುವ ಮೂಲಕ ಜಂಟಿ ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ 19 ವಿದ್ಯಾರ್ಥಿಗಳು 700 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದರೆ, 1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 690 ಕ್ಕಿಂತ ಹೆಚ್ಚು ಅಂಕ ಪಡೆದ 138 ವಿದ್ಯಾರ್ಥಿಗಳಲ್ಲಿ ಶೇ.99 ರಷ್ಟು ಮಂದಿ 17 ರಿಂದ 19 ವರ್ಷದೊಳಗಿನವರಾಗಿದ್ದು, ಶೇ.93 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆದವರಾಗಿದ್ದಾರೆ.
ಈ ಹಿಂದೆ ಮೇ 3 ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಿ, ಜೂನ್ 21 ರಂದು ಮರುಪರೀಕ್ಷೆ ನಡೆಸಲಾಗಿತ್ತು. ಭಾರತದ 551 ನಗರಗಳು ಹಾಗೂ ವಿದೇಶದ 14 ನಗರಗಳು ಸೇರಿದಂತೆ ಒಟ್ಟು 5,440 ಕೇಂದ್ರಗಳಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಈ ಕಟ್ಟುನಿಟ್ಟಿನ ಮರುಪರೀಕ್ಷೆಗೆ ಹಾಜರಾಗಿದ್ದರು.
ಈ ಬಾರಿಯ ಮರುಪರೀಕ್ಷೆಯಲ್ಲಿ ಎಲ್ಲಾ ವರ್ಗಗಳ ಕಟ್-ಆಫ್ ಅಂಕಗಳು ಏರಿಕೆಯಾಗಿವೆ. ಸಾಮಾನ್ಯ ವರ್ಗಕ್ಕೆ 50ನೇ ಪರ್ಸೆಂಟೈಲ್ (715-213 ಅಂಕಗಳು) ನಿಗದಿಪಡಿಸಲಾಗಿದ್ದು, ಬರೋಬ್ಬರಿ 9,96,935 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಬಿಸಿ, ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ 40ನೇ ಪರ್ಸೆಂಟೈಲ್ (212-177 ಅಂಕಗಳು) ಕಟ್-ಆಫ್ ನಿಗದಿಪಡಿಸಲಾಗಿದೆ. ಇದರಲ್ಲಿ 81,111 ಒಬಿಸಿ, 29,947 ಎಸ್ಸಿ ಹಾಗೂ 12,452 ಎಸ್ಟಿ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಉತ್ತರ ಪ್ರದೇಶ ರಾಜ್ಯವು ಅತಿ ಹೆಚ್ಚು ಯಶಸ್ವಿ ಅಭ್ಯರ್ಥಿಗಳನ್ನು ಹೊಂದಿದ್ದು, ಅಲ್ಲಿಂದ 1.7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅತ್ತ ಭೌಗೋಳಿಕವಾಗಿ ಚಿಕ್ಕದಾದ ಲಕ್ಷದ್ವೀಪದಿಂದಲೂ 43 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಟಾಪ್ 17 ರ್ಯಾಂಕ್ (705 ಕ್ಕೂ ಹೆಚ್ಚು ಅಂಕ) ಪಡೆದ ವಿದ್ಯಾರ್ಥಿಗಳು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಎಂಟು ರಾಜ್ಯಗಳಿಂದ ಬಂದವರಾಗಿದ್ದಾರೆ.
ದಕ್ಷಿಣ ಭಾರತದ ಅಭ್ಯರ್ಥಿಗಳ ಸಾಧನೆಯನ್ನು ನೋಡುವುದಾದರೆ, ಕರ್ನಾಟಕದ ವೈಷ್ಣವಿ ದಾಸ್ ಅವರು 99.9979 ಪರ್ಸೆಂಟೈಲ್ ಗಳಿಸಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ 20ನೇ ರ್ಯಾಂಕ್ ಪಡೆದಿದ್ದಾರೆ. ಆಂಧ್ರಪ್ರದೇಶದ ನಮಲಾ ಪ್ರೇರಣಾ 36ನೇ ರ್ಯಾಂಕ್, ಒಡಿಶಾದ ಸಾತ್ವಿಕ್ ಪಟ್ನಾಯಕ್ 40ನೇ ರ್ಯಾಂಕ್ ಗಳಿಸಿದರೆ, ಕೇರಳದ ನೀರಜ್ ಬಿ 89ನೇ ರ್ಯಾಂಕ್ ಪಡೆದಿದ್ದಾರೆ. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯನ್ನು NTA ಅಧಿಕೃತ ವೆಬ್ಸೈಟ್ neet.nta.nic.in ನಲ್ಲಿ ವೀಕ್ಷಿಸಬಹುದಾಗಿದೆ.




